ADVERTISEMENT

ಕೋವಿಡ್ ನಡುವೆ ತೆಲಂಗಾಣ ಸರ್ಕಾರದಿಂದ ₹11 ಕೋಟಿ ವೆಚ್ಚದ ಕಾರು ಖರೀದಿ: ವರದಿ

ಡೆಕ್ಕನ್ ಹೆರಾಲ್ಡ್
Published 14 ಜೂನ್ 2021, 12:10 IST
Last Updated 14 ಜೂನ್ 2021, 12:10 IST
ಚಿತ್ರ ಕೃಪೆ: Twitter/@sravandasoju
ಚಿತ್ರ ಕೃಪೆ: Twitter/@sravandasoju   

ಹೈದರಾಬಾದ್: ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರ ಬಿಕ್ಕಟ್ಟಿನ ನಡುವೆಯೂ ತೆಲಂಗಾಣ ಸರ್ಕಾರವು ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ₹11 ಕೋಟಿ ವೆಚ್ಚದಲ್ಲಿ 32 ಐಷಾರಾಮಿ ಕಾರುಗಳನ್ನು ಖರೀದಿಸಿದೆ ಎಂದು ವರದಿಯಾಗಿದೆ. ತಲಾ 25-30 ಲಕ್ಷ ರೂ. ವೆಚ್ಚದ ಐಷಾರಾಮಿ ಕಾರುಗಳನ್ನು ಖರೀದಿಸಲಾಗಿದ್ದು, ತೆಲಂಗಾಣ ಸರ್ಕಾರದ ವಿರುದ್ಧ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅನುಮೋದನೆಯೊಂದಿಗೆ ಸಾರಿಗೆ ಸಚಿವರುರಾಜ್ಯದ 32 ಹೆಚ್ಚುವರಿ ಜಿಲ್ಲಾಧಿಕಾರಿಗಳಿಗೆ ಕಿಯಾ ಕಾರ್ನಿವಲ್ ಕಾರುಗಳನ್ನು ಹಂಚಿದ್ದಾರೆ ಎಂದು ಎನ್‌ಡಿಟಿವಿ ಸುದ್ದಿ ಸಂಸ್ಥೆ ವರದಿ ಮಾಡಿವೆ.

ದುಡ್ಡನ್ನು ಬಾರಿ ಸಂಖ್ಯೆಯಲ್ಲಿ ಪೋಲು ಮಾಡಿರುವುದು 'ಅಪರಾಧ ಕೃತ್ಯ' ಎಂದು ದೂರಿರುವ ಬಿಜೆಪಿ, ಅಧಿಕಾರಿಗಳನ್ನು ಮನ ಮೆಚ್ಚಿಸಲು ಹೀಗೆ ಮಾಡಲಾಗಿದೆ ಎಂದು ಆರೋಪಿಸಿದೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್, '32 ಐಷಾರಾಮಿ ವಾಹನಗಳನ್ನು ಖರೀದಿಸಲು 11 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಳ್ಳಲು ಹೇಗೆ ಸಾಧ್ಯ' ಎಂದು ಟ್ವಿಟರ್ ವಿಡಿಯೊದಲ್ಲಿ ಪ್ರಶ್ನಿಸಿದ್ದಾರೆ.

'ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ಹಣ ವ್ಯರ್ಥ ಮಾಡುತ್ತಿದ್ದಾರೆ. ಇನ್ನೊಂದೆಡೆ ಕೋವಿಡ್‌ನಿಂದ ಆಸ್ಪತ್ರೆಗೆ ದಾಖಲಾದ ಅನೇಕ ಜನರು ಸಾಲದ ಹೊರೆಯಿಂದ ಸಾಯುತ್ತಿದ್ದಾರೆ. ಈ ನಿರ್ಧಾರ ಭಯಾನಕ ಮತ್ತು ಯೋಚಿಸಲಾಗದು' ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕ್ರಮವನ್ನೂ ಕೂಡಲೇ ಹಿಂತೆಗೆದುಕೊಳ್ಳುವಂತೆ ತೆಲಂಗಾಣ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

'ಉಳಿತಾಯದಲ್ಲಿದ್ದ ತೆಲಂಗಾಣವನ್ನು 40,000 ಕೋಟಿ ರೂ.ಗಳ ಸಾಲದ ಕೂಪಕ್ಕೆ ತಳ್ಳಲಾಗಿದೆ. ಸರ್ಕಾರವು ಈಗಾಗಲೇ ಉತ್ತಮ ಸ್ಥಿತಿಯಲ್ಲಿರುವ ಕಾರುಗಳನ್ನು ಹೊಂದಿದೆ' ಎಂದು ಕಾಂಗ್ರೆಸ್ ವಕ್ತಾರ ಡಿ. ಶ್ರಾವಣ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ:

ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರವು, ಅಧಿಕಾರಿಗಳಿಗೆ ಈ ಕಾರುಗಳನ್ನು ಹಂಚುವ ಮೂಲಕ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿದೆ. ಇದರ ಬದಲು ಸರ್ಕಾರ ಆಸ್ಪತ್ರೆಗಳಲ್ಲಿ ಹೆಚ್ಚಿನ ಹಾಸಿಗೆ ಹಾಕಿಸಿಕೊಳ್ಳಲು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಬಸ್ ಖರೀದಿಗೆ ದುಡ್ಡು ಬಳಕೆ ಮಾಡಬಹುದಿತ್ತು ಎಂದಿದ್ದಾರೆ.

ಏತನ್ಮಧ್ಯೆ ತೆಲಂಗಾಣ ಮುಖ್ಯಮಂತ್ರಿ ಐಷಾರಾಮಿ ಕಾರು ಖರೀದಿಯನ್ನು ಸಮರ್ಥಿಸಿಕೊಂಡಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಇಡೀ ಜಿಲ್ಲೆಗೆ ಸಂಚರಿಸಿ ತಮ್ಮ ಕರ್ತವ್ಯ ನಿರ್ವಹಿಸಲು ಕಾರು ಅಗತ್ಯಗತ್ಯವಾಗಿದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಕೋವಿಡ್-19 ಲಾಕ್‌ಡೌನ್‌ನಿಂದಾಗಿ ತೆಲಂಗಾಣವು ₹4,500 ಕೋಟಿ ನಷ್ಟ ಅನುಭವಿಸಿದೆ ಎಂದು ಹಣಕಾಸು ಸಚಿವ ಹರೀಶ್ ರಾವ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.