ADVERTISEMENT

ತೆಲಂಗಾಣ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ 38ಕ್ಕೆ ಏರಿಕೆ; ಇನ್ನೂ 9 ಮಂದಿ ನಾಪತ್ತೆ

ಪಿಟಿಐ
Published 3 ಜುಲೈ 2025, 12:51 IST
Last Updated 3 ಜುಲೈ 2025, 12:51 IST
<div class="paragraphs"><p>ತೆಲಂಗಾಣ | ಔಷಧ ಘಟಕದಲ್ಲಿ ಸ್ಫೋಟ</p></div>

ತೆಲಂಗಾಣ | ಔಷಧ ಘಟಕದಲ್ಲಿ ಸ್ಫೋಟ

   

ಸಂಗಾರೆಡ್ಡಿ (ತೆಲಂಗಾಣ): ಸಿಗಾಚಿ ಔಷಧ ಕಾರ್ಖಾನೆಯಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಇನ್ನೂ ಒಂಬತ್ತು ನಾಪತ್ತೆಯಾಗಿದ್ದಾರೆ ಎಂದು ಸಂಗಾರೆಡ್ಡಿ ಜಿಲ್ಲೆಯ ಎಸ್‌ಪಿ ಪಾರಿತೋಷ್‌ ಪಂಕಜ್‌ ಗುರುವಾರ ಹೇಳಿದ್ದಾರೆ.

‘ದುರಂತದಲ್ಲಿ 38 ಮಂದಿ ಮೃತಪಟ್ಟಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ. ಮೂಳೆಗಳು ಒಳಗೊಂಡಂತೆ ಮಾನವ ದೇಹದ ಅಂಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದ್ದು, ಅಲ್ಲಿನ ವರದಿ ಲಭಿಸಿದ ಬಳಿಕ ಮೃತರ ನಿಖರ ಸಂಖ್ಯೆ ತಿಳಿಯಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಅವಶೇಷಗಳ ತೆರವು ಕಾರ್ಯಾಚರಣೆ ಶೇ 90ರಷ್ಟು ಪೂರ್ಣಗೊಂಡಿದ್ದು, ಇನ್ನಷ್ಟು ಮೃತದೇಹಗಳು ದೊರೆಯುವ ಸಾಧ್ಯತೆ ಕಡಿಮೆ. ಆದರೆ ಮಾನವ ದೇಹದ ಅಂಗಗಳು ದೊರೆಯುವ ಸಾಧ್ಯತೆಯಿದ್ದು, ಅವುಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗುವುದು’ ಎಂದರು.

ದುರಂತದಲ್ಲಿ 40 ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ ಎಂದು ಕಂಪನಿಯ ಆಡಳಿತ ಮಂಡಳಿ ಹೇಳಿದ್ದು, ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡುವುದಾಗಿ ಬುಧವಾರ ಘೋಷಿಸಿತ್ತು.

ಸಮಿತಿ ಸದಸ್ಯರ ಭೇಟಿ ಸಾಧ್ಯತೆ: ದುರಂತದ ಕಾರಣ ಪತ್ತೆಹಚ್ಚಲು ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿಯ ಸದಸ್ಯರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಸಿಎಸ್‌ಐಆರ್‌–ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಕೆಮಿಕಲ್ ಟೆಕ್ನಾಲಜಿಯ ವಿಜ್ಞಾನಿ ಡಾ.ಬಿ.ವೆಂಕಟೇಶ್ವರ ರಾವ್‌ ನೇತೃತ್ವದ ಸಮಿತಿಯು ಸರ್ಕಾರಕ್ಕೆ ಒಂದು ತಿಂಗಳಲ್ಲಿ ವರದಿ ಸಲ್ಲಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.