ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯಲ್ಲಿ ರಿಯಾಕ್ಟರ್ ಸ್ಫೋಟಗೊಂಡ ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸುತ್ತಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ
ಪಿಟಿಐ ಚಿತ್ರ
ಹೈದರಾಬಾದ್: ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‌ನಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬದವರಿಗೆ ₹ 1 ಕೋಟಿ ಪರಿಹಾರ ನೀಡುವ ಬಗ್ಗೆ ಕಂಪನಿಯ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಭರವಸೆ ನೀಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಸಿಎಂ, ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ ₹ 10 ಲಕ್ಷ, ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದವರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
'ಮೃತರ ಕುಟುಂಬಗಳಿಗೆ ತಲಾ ₹ 1 ಕೋಟಿ ಪರಿಹಾರ ವಿತರಿಸಲು ಆದೇಶಿಸಿದ್ದೇನೆ. ಅದನ್ನು ಖಾತ್ರಿಪಡಿಸಿಕೊಳ್ಳಲು, ರಾಜ್ಯ ಸರ್ಕಾರವು ಕಂಪನಿಯ ಆಡಳಿತ ಮಂಡಳಿಯೊಂದಿಗೆ ಮಾತನಾಡಲಿದೆ' ಎಂದು ಹೇಳಿದ್ದಾರೆ.
ಅದಲ್ಲದೆ, ರಾಜ್ಯ ಸರ್ಕಾರವು ಮೃತರ ಕುಟುಂಬಗಳಗೆ ತಲಾ ₹ 1 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹ 50 ಸಾವಿರ ತಕ್ಷಣದ ಅಗತ್ಯಗಳಿಗಾಗಿ ಕೂಡಲೇ ಬಿಡುಗಡೆ ಮಾಡಲಿದೆ ಎಂದಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಒಡಿಶಾ, ಬಿಹಾರ, ಆಂಧ್ರಪ್ರದೇಶ, ಮಧ್ಯಪ್ರದೇಶ ಹಾಗೂ ತೆಲಂಗಾಣದವರು ಎಂದು ಮಾಹಿತಿ ನೀಡಿರುವ ಅಧಿಕಾರಿಗಳು, ದುರಂತದ ಸಮಯದಲ್ಲಿ ಅಂದಾಜು 143 ಮಂದಿ ಕಾರ್ಖಾನೆಯಲ್ಲಿದ್ದರು ಎಂದು ತಿಳಿಸಿದ್ದಾರೆ.
ಗಾಯಾಳುಗಳನ್ನು ದಾಖಲಿಸಲಾಗಿರುವ ಆಸ್ಪತ್ರೆಗೂ ಭೇಟಿ ನೀಡಿರುವ ಸಿಎಂ, ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಮತ್ತು ಸಿಗಾಚಿ ಕಂಪನಿಯೇ ಭರಿಸಲಿದೆ ಎಂದಿದ್ದಾರೆ. ಹಾಗೆಯೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.