ADVERTISEMENT

ತೆಲಂಗಾಣದಲ್ಲಿ ತನಿಖೆ ನಡೆಸಲು ಸಿಬಿಐಗೆ ಅನುಮತಿ ಇಲ್ಲ: ಕೋರ್ಟ್‌ಗೆ ಸರ್ಕಾರ ಮಾಹಿತಿ

ಪಿಟಿಐ
Published 30 ಅಕ್ಟೋಬರ್ 2022, 10:28 IST
Last Updated 30 ಅಕ್ಟೋಬರ್ 2022, 10:28 IST
ಕೆ. ಚಂದ್ರಶೇಖರ ರಾವ್‌
ಕೆ. ಚಂದ್ರಶೇಖರ ರಾವ್‌   

ಹೈದರಾಬಾದ್‌: ತೆಲಂಗಾಣದಲ್ಲಿ ತನಿಖೆ ನಡೆಸುವುದಕ್ಕೆ ಕೇಂದ್ರೀಯ ತನಿಖಾ ದಳ(ಸಿಬಿಐ)ಗೆ ನೀಡಲಾಗಿದ್ದ 'ಮುಕ್ತ ಸಮ್ಮತಿ'ಯನ್ನು ಸರ್ಕಾರ ಹಿಂಪಡೆದಿದೆ.

ಟಿಆರ್‌ಎಸ್ ಶಾಸಕರ ಖರೀದಿ ಯತ್ನ ಪ‍್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ತೆಲಂಗಾಣದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ (ಎಎಜಿ) ಅವರು ಹೈಕೋರ್ಟ್‌ಗೆ ಈ ಮಾಹಿತಿ ನೀಡಿದ್ದಾರೆ.

ನಾಲ್ವರು ಟಿಆರ್‌ಎಸ್ ಶಾಸಕರನ್ನು ಖರೀದಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆ–1946ರ, ಸೆಕ್ಷನ್‌ 6ರ ಅಡಿಯಲ್ಲಿ, ಸಿಬಿಐ ತನಿಖೆಗೆ ಈ ಹಿಂದೆ ತೆಲಂಗಾಣ ನೀಡಿದ್ದ ಮುಕ್ತ ಸಮ್ಮಿತಿಯನ್ನು ಆಗಸ್ಟ್‌ 30ರಂದು ಗೃಹ ಇಲಾಖೆಯ ಆದೇಶದ ಮೂಲಕ ಹಿಂಪಡೆಯಲಾಗಿದೆ ಎಂದು ಎಎಜಿ ಅವರು ಕೋರ್ಟ್‌ಗೆ ತಿಳಿಸಿದರು.

ಅಲ್ಲದೇ, ಈ ಪ್ರಕರಣದಲ್ಲಿ ರಿಟ್‌ ಅರ್ಜಿ ಸಲ್ಲಿಸಲು ಬಿಜೆಪಿಗೆ ಯಾವುದೇ ಅಧಿಕಾರವೂ ಇಲ್ಲ ಎಂದು ಎಎಜಿ ವಾದಿಸಿದ್ದಾರೆ.

ಟಿಆರ್‌ಎಸ್‌ನ ನಾಲ್ವರು ಶಾಸಕರ ಖರೀದಿ ಯತ್ನದ ಪ್ರಕರಣ ತೆಲಂಗಾಣದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.