ADVERTISEMENT

ಮೋದಿಗೂ ’ಆಧಾರ್‌’ ಚಾಲೆಂಜ್‌: ಟ್ರಾಯ್‌ ಅಧ್ಯಕ್ಷರ ವೈಯಕ್ತಿಕ ಮಾಹಿತಿ ಸೋರಿಕೆ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2018, 4:30 IST
Last Updated 29 ಜುಲೈ 2018, 4:30 IST
ಟ್ರಾಯ್‌ ಅಧ್ಯಕ್ಷ ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆ
ಟ್ರಾಯ್‌ ಅಧ್ಯಕ್ಷ ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆ   

ನವದೆಹಲಿ: ಟ್ವಿಟರ್‌ನಲ್ಲಿ ಆಧಾರ್‌ ಸಂಖ್ಯೆ ಪ್ರಕಟಿಸಿ, ಸವಾಲು ಹಾಕಿದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಆರ್‌.ಎಸ್‌.ಶರ್ಮಾ ಅವರ ವೈಯಕ್ತಿಕ ಮಾಹಿತಿ ಒಂದರಿಂದೊಂದು ಬಹಿರಂಗವಾಗುತ್ತಲೇ ಇತ್ತು.

ಸವಾಲು ಸ್ವೀಕರಿಸಿದ ಫ್ರೆಂಚ್‌ ಭದ್ರತಾ ತಜ್ಞನೆಂದು ಕರೆದುಕೊಳ್ಳುವ ಎಲಿಯಟ್‌ ಆಲ್ಡರ್‌ಸನ್‌(@fs0c131y) ಹೆಸರಿನ ಟ್ವೀಟಿಗ, ಶರ್ಮಾ ಅವರ ಪಾನ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಸೇರಿ ಹಲವುವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಟ್ವೀಟಿಸಿದ. ಇದಾಗಿ ಕೆಲ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿರುವ ಎಲಿಯಟ್‌, ’ಹಾಯ್‌, ನಿಮ್ಮ ಆಧಾರ್‌ ಸಂಖ್ಯೆಯನ್ನು ಪ್ರಕಟಿಸುವಿರಾ(ನಿಮ್ಮಲ್ಲಿ ಇದ್ದರೆ)? ಎಂದು ಸವಾಲಿನ ಆಟ ಮುಂದುವರಿಸುವ ಇರಾದೆ ತೋರಿದ್ದಾರೆ.

’ನಾನೀಗ ನಿನಗೆ ಈ ಸವಾಲೊಡ್ಡುತ್ತಿದ್ದೇನೆ: ನನಗೆ ಯಾವ ರೀತಿ ಹಾನಿಯಾಗುವಂತೆ ಮಾಡಬಹುದು. ಸರಿಯಾದ ಒಂದು ಉದಾಹರಣೆ ತೋರು’ ಎಂದು ತನ್ನ 12 ಅಂಕಿಗಳ ಆಧಾರ್‌ ಸಂಖ್ಯೆ ಪ್ರಕಟಿಸಿ ಟ್ರಾಯ್‌ನ ಶರ್ಮಾ ಟ್ವೀಟ್‌ ಚಾಲೆಂಜ್‌ ಹೂಡಿದ್ದರು. ಈ ಟ್ವೀಟ್‌1,092 ಮರು ಹಂಚಿಕೆ,1,654 ಲೈಕ್ ಕಂಡಿದ್ದು, ಬಾರೀ ಚರ್ಚೆಗೆ ಕಾರಣವಾಗಿದೆ.

ADVERTISEMENT

@kingslyj ಎಂಬ ಟ್ವೀಟ್‌ ಖಾತೆಯಿಂದ ಶರ್ಮಾ ಅವರಿಗೆ ’ನಿಮಗೆ 13 ಅಡಿ ಗೋಡೆಯಸುರಕ್ಷಿತ ವ್ಯವಸ್ಥೆಯಲ್ಲಿ ಅಷ್ಟೊಂದು ನಂಬಿಕೆ ಇದ್ದರೆ, ನಿಮ್ಮ ಆಧಾರ್‌ ಮಾಹಿತಿಯನ್ನು ಬಹಿರಂಗ ಪಡಿಸಿ’ ಎಂದು ಸಾವಾಲು ಹಾಕಿದ್ದ. ಇದಕ್ಕೆ ಉತ್ತರವಾಗಿ ಶರ್ಮಾ ಆಧಾರ್‌ ಸಂಖ್ಯೆ ಪ್ರಕಟಿಸಿದ್ದರು. ಆದರೆ, ಎಲಿಯಟ್‌ ಈ ಸವಾಲು ಸ್ವೀಕರಿಸಿದ.

ಎಲಿಯಟ್‌ ಮೊದಲಿಗೆ ಶರ್ಮಾ ಅವರ ಆಧಾರ್‌ನೊಂದಿಗೆ ಸಂಪರ್ಕಿಸಲಾಗಿರುವ ಮೊಬೈಲ್‌ ಸಂಖ್ಯೆ ಪ್ರಕಟಿಸಿ, ಬಳಿಕ ಪ್ಯಾನ್‌ ಸಂಖ್ಯೆ, ಮತ್ತೊಂದು ಮೊಬೈಲ್‌ ಸಂಖ್ಯೆ, ಇಮೇಲ್‌ ಐಡಿ, ಬಳಸುತ್ತಿರುವ ಮೊಬೈಲ್‌ ಹಾಗೂ ವಾಟ್ಸ್‌ಆ್ಯಪ್‌ ಪ್ರೊಫೈಲ್‌ ಚಿತ್ರವನ್ನು ಟ್ವೀಟಿಸಿದ್ದಾನೆ.

’ಜನರು ನಿಮ್ಮ ವೈಯಕ್ತಿಕ ವಿಳಾಸ, ಜನ್ಮದಿನಾಂಕ ಹಾಗೂ ಪರ್ಯಾಯ ಮೊಬೈಲ್‌ ಸಂಖ್ಯೆಯನ್ನು ಪಡೆದಿದ್ದಾರೆ. ಇದನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಏಕೆ ಆಧಾರ್‌ ಸಂಖ್ಯೆ ಸಾರ್ವಜನಿಕಗೊಳಿಸುವುದು ಉತ್ತಮವಾದುದಲ್ಲ ಎಂಬುದು ಈಗ ನಿಮಗೆ ಅರ್ಥವಾಗಲಿದೆ ಎಂದು ನಂಬುತ್ತೇನೆ’ ಎಂದು ಎಲಿಯಟ್‌ ಟ್ವೀಟಿಸಿದ್ದಾನೆ.

ಮೊಬೈಲ್‌ ಸಂಖ್ಯೆ, ಪಾನ್‌ಸಂಖ್ಯೆ ಹಾಗೂ ಪ್ರೊಫೈಲ್‌ ಚಿತ್ರದಲ್ಲಿ ಇರುವ ಇತರರನ್ನು ಎಲಿಯಟ್‌ ಮಸುಕು ಮಾಡಿ ಟ್ವೀಟಿಸಿದ್ದಾನೆ. ಹಾಗೇ, ಅವರ ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಸಂಖ್ಯೆ ಸಂಪರ್ಕಿಸಲಾಗಿಲ್ಲ ಎಂದಿದ್ದಾನೆ. ’ನಾನು ಆಧಾರ್‌ಗೆ ವಿರೋಧಿ ಅಲ್ಲ. ಆದರೆ, ಆಧಾರ್‌ನ್ನು ಹ್ಯಾಕ್‌ ಮಾಡಲು ಸಾಧ್ಯವೇ ಇಲ್ಲವೆಂದು ಹೇಳಿಕೊಳ್ಳುವವರ ವಿರೋಧಿ’ ಎಂದಿದ್ದಾನೆ.

ಶನಿವಾರ ಸಂಜೆಯಿಂದ ಶುರುವಾಗಿರುವ ಈ ಟ್ವೀಟ್‌ ಸವಾಲಿನ ಆಟ ಭಾನುವಾರ ಬೆಳಗಿನ ಜಾವದವರೆಗೂ ಮುಂದುವರಿದು ಪ್ರಧಾನಿ ಮೋದಿ ಅವರ ಆಧಾರ್‌ ಸಂಖ್ಯೆ ಬಹಿರಂಗ ಪಡಿಸುವ ಸವಾಲಿನ ವರೆಗೆ ಬಂದಿದೆ.

’ಟ್ರಾಯ್‌ ಅಧ್ಯಕ್ಷ ಎನ್ನುವುದಕ್ಕಿಂತ ಸಾಮಾನ್ಯ ನಾಗರಿಕನಾಗಿ ಆಧಾರ್‌ ಸಂಖ್ಯೆ ನೀಡಿದ್ದೇನೆ. ಆಧಾರ್‌ ಸುತ್ತಲೂ ಕವಿದಿರುವ ಮಾಹಿತಿ ಸೋರಿಕೆ, ವೈಯಕ್ತಿಕ ಮಾಹಿತಿ ಸುರಕ್ಷತೆ ತೊಡಕಿನಊಹಾಪೋಹಗಳು ತಪ್ಪು ದಾರಿಗೆ ಎಳೆಯುತ್ತಿರುವ ಮಾಹಿತಿ ಎಂಬುದನ್ನು ತೋರುವುದಕ್ಕಾಗಿ ಈ ಪ್ರಯತ್ನ. ಆಧಾರ್‌ ಸಂಖ್ಯೆ ಬಳಸಿ ಏನು ಹಾನಿ ಮಾಡಬಹುದು? ಅದಕ್ಕಾಗಿ ಕಾಯುತ್ತಿದ್ದೇನೆ. ನನ್ನ ಎಲ್ಲ ಬ್ಯಾಂಕ್‌ ಖಾತೆಗಳೂ ಸಹ ಆಧಾರ್‌ನೊಂದಿಗೆ ಸಂಪರ್ಕಿಸಲಾಗಿದೆ’ ಎಂದುಟ್ವೀಟಿಗರಿಗೆ ಶರ್ಮಾ ಉತ್ತರಿಸಿದ್ದಾರೆ.

ಆಗಸ್ಟ್‌ 9ಕ್ಕೆ ಶರ್ಮಾ ಅವರ ಅಧಿಕಾರವಧಿ ಪೂರ್ಣಗೊಳ್ಳಲಿದ್ದು, ಅವರ ವಯಸ್ಸು ಮತ್ತು ತಂತ್ರಜ್ಞಾನದ ಬಳಕೆ ಬಗ್ಗೆಯೂ ವಾದ–ವಿವಾದ ನಡೆದಿದೆ.ಶರ್ಮಾ ಅವರ ಟ್ವೀಟ್‌ನಿಂದ ಪ್ರೇರಣೆ ಪಡೆದು ಕೆಲವರುಕಾಂಗ್ರೆಸ್‌, ಬಿಜೆಪಿ ಮುಖಂಡರನ್ನು ಟ್ಯಾಗ್‌ ಮಾಡಿ ಆಧಾರ್‌ ಚಾಲೆಂಜ್‌ ಎಸೆದಿದ್ದಾರೆ.

ಎಲಿಯೆಟ್‌ ಸೋರಿಕೆ ಮಾಡಿರುವ ಮಾಹಿತಿಗಳನ್ನು ಎಲ್ಲ ಸರ್ಕಾರ ವೆಬ್‌ಸೈಟ್‌ಗಳಿಂದಲೇ ಪಡೆಯುವುದು ಸಾಧ್ಯವಿದೆ. ಇದೇನು ಆಧಾರ್‌ ಹ್ಯಾಕ್‌ ಮಾಡಿ ಪಡೆಯುವ ಮಾಹಿತಿ ಅಲ್ಲವೆಂದು ಒಂದೊಂದು ಹಂತವನ್ನು ಎಲೆಕ್ಟ್ರಿಕ್‌ ಹೆಸರಿನ ಟ್ವೀಟಿಗಟ್ವೀಟಿಸಿದ್ದಾರೆ.

ವೈಯಕ್ತಿಕ ಮಾಹಿತಿ ಕುರಿತಾದ ಚರ್ಚೆ ಈಗಾಗಲೇ ಸುಪ್ರೀಂ ಕೋರ್ಟ್‌ಗೂ ತಲುಪಿದ್ದು, ಸಾಮಾಜಿಕ ಕಾರ್ಯಕರ್ತರು ಹಾಗೂ ಇತರರು 12 ಅಂಕಿಗಳ ಆಧಾರ್‌ ಬಯೋಮೆಟ್ರಿಕ್‌ ಸಂಖ್ಯೆ ನಾಗರಿಕರ ವೈಯಕ್ತಿಕತೆಗೆ ಹಾನಿ ಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.