ADVERTISEMENT

UP | ಬಾರಾಬಂಕಿ ದೇವಾಲಯದಲ್ಲಿ ಕಾಲ್ತುಳಿತ: 2 ಸಾವು; ದಿನದ ಅಂತರದಲ್ಲಿ 2ನೇ ದುರಂತ

ಪಿಟಿಐ
Published 28 ಜುಲೈ 2025, 5:48 IST
Last Updated 28 ಜುಲೈ 2025, 5:48 IST
<div class="paragraphs"><p>ಉತ್ತರ ಪ್ರದೇಶದ&nbsp;ಹೈದರ್‌ಗರ್‌ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಲ್ತುಳಿತ ಪ್ರಕರಣದ ಸಂತ್ರಸ್ತರು</p></div>

ಉತ್ತರ ಪ್ರದೇಶದ ಹೈದರ್‌ಗರ್‌ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಲ್ತುಳಿತ ಪ್ರಕರಣದ ಸಂತ್ರಸ್ತರು

   

ಪಿಟಿಐ ಚಿತ್ರ

ಬಾರಾಬಂಕಿ: ವಿದ್ಯುತ್ ತಂತಿ ತುಂಡಾಗಿದ್ದರಿಂದ ಭಯಭೀತರಾದ ಜನರು ಸುರಕ್ಷಿತ ಸ್ಥಳಕ್ಕೆ ಧಾವಿಸಲು ಮುಂದಾದಾಗ ಉಂಟಾದ ಕಾಲ್ತುಳಿತದಲ್ಲಿ ಇಬ್ಬರು ಮೃತಪಟ್ಟು, 32 ಜನರಿಗೆ ಗಾಯಗಳಾದ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ದೇವಾಲಯದಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ. 

ADVERTISEMENT

‘ಶ್ರಾವಣ ಸೋಮವಾರದ ವಿಶೇಷ ಪೂಜೆಗಾಗಿ ಹೈದರ್‌ಗರ್‌ನಲ್ಲಿರುವ ಅವಸಾನೇಶ್ವರ ದೇವಾಲಯದಲ್ಲಿ ಸೋಮವಾರ ಜಲಾಭಿಷೇಕ ಆಯೋಜನೆಗೊಂಡಿತ್ತು. ದೇವಾಲಯಕ್ಕೆ ಹೊದಿಸಲಾದ ಟಿನ್‌ ಶೀಟ್‌ಗಳ ಮೇಲೆದ್ದ ವಿದ್ಯುತ್ ತಂತಿಗಳನ್ನು ಕೋತಿಗಳು ತುಂಡರಿಸಿದ ಪರಿಣಾಮ, ತಂತಿಗಳು ಬಿದ್ದವು. ವಿದ್ಯುತ್ ಪ್ರವಹಿಸುವ ಭೀತಿಯಿಂದ ಜನರು ದಿಕ್ಕಾಪಾಲಾಗಿ ಓಡಿದರು. ಇದರಿಂದ ಕಾಲ್ತುಳಿತ ಉಂಟಾಯಿತು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮುಬಾರಕ್‌ಪುರ ಗ್ರಾಮದ ಪ್ರಶಾಂತ್ (22) ಹಾಗೂ ಮತ್ತೊಬ್ಬ 30 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ತ್ರಿವೇದಿಗಂಜ್ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದಿದ್ದಾರೆ.

ಹರಿದ್ವಾರದ ಬೆಟ್ಟದಲ್ಲಿರುವ ಮಾನಸ ದೇವಿ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳ ಮೇಲೆ ಭಾನುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಎಂಟು ಜನ ಮೃತಪಟ್ಟ ಘಟನೆ ನಡೆದ ಮರುದಿನವೇ ಬಾರಾಬಂಕಿಯಲ್ಲಿ ಅಂಥದ್ದೇ ಮತ್ತೊಂದು ದುರ್ಘಟನೆ ನಡೆದಿದೆ. ಹರಿದ್ವಾರದಲ್ಲೂ ವಿದ್ಯುತ್‌ ತಂತಿಯು ಮೆಟ್ಟಿಲುಗಳಿಗೆ ಅಳವಡಿಸಿದ ಕಬ್ಬಿಣದ ಹಿಡಿಕೆಗೆ ತಗುಲಿದೆ ಎಂಬ ವದಂತಿ ಕಾಲ್ತುಳಿತಕ್ಕೆ ಕಾರಣವಾಗಿತ್ತು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದರು.

ಈ ಘಟನೆಯಲ್ಲಿ ಗಾಯಗೊಂಡ 10 ಜನರನ್ನು ತ್ರಿವೇದಿಗಂಜ್‌ ಆಸ್ಪತ್ರೆಗೆ ಕರೆತರಲಾಗಿತ್ತು. ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದ್ದ ಕಾರಣ ಬೇರೆ ಆಸ್ಪತ್ರೆಗೆ ಕಳುಹಿಸಲಾಯಿತು. 26 ಗಾಯಾಳುಗಳು ಹೈದರ್‌ಗರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಘಟನೆ ನಂತರ ದೇವಾಲಯದ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ಕೋತಿಗಳು ವಿದ್ಯುತ್ ತಂತಿ ತುಂಡು ಮಾಡಿದ್ದೇ ಘಟನೆಗೆ ಕಾರಣ. ಇದರಿಂದ ಸ್ಥಳದಲ್ಲಿ ಕಾಲ್ತುಳಿತ ಉಂಟಾಯಿತು’ ಎಂದು ಜಿಲ್ಲಾಧಿಕಾರಿ ಶಶಾಂಕ್ ತ್ರಿಪಾಠಿ ತಿಳಿಸಿದ್ದಾರೆ.

ಘಟನೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬಗಳಿಗೆ ತಮ್ಮ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿರುವುದಾಗಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಘಟನೆ ನಂತರ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳು ಎಂದಿನಂತೆ ನಡೆದವು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.