ADVERTISEMENT

ಭಾರತ–ಚೀನಾ ಗಡಿಯಲ್ಲಿ ಬಿಕ್ಕಟ್ಟು ಉಲ್ಬಣ: ಲಡಾಕ್‌ಗೆ ನರವಾಣೆ ಭೇಟಿ 

ಪಿಟಿಐ
Published 24 ಮೇ 2020, 2:19 IST
Last Updated 24 ಮೇ 2020, 2:19 IST
ಚೀನಾ ಗಡಿಯಲ್ಲಿ ಜನರಲ್ ಮನೋಜ್ ಮುಕುಂದ್ ನರವಾಣೆ (ಸಂಗ್ರಹ ಚಿತ್ರ)
ಚೀನಾ ಗಡಿಯಲ್ಲಿ ಜನರಲ್ ಮನೋಜ್ ಮುಕುಂದ್ ನರವಾಣೆ (ಸಂಗ್ರಹ ಚಿತ್ರ)   

ನವದೆಹಲಿ:ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಎಸಿ) ಚೀನಾ ತನ್ನ ಸೇನಾ ಪಡೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.ಈ ಮೂಲಕ ಭಾರತೀಯ ಸೇನೆಯ ಜತೆಗಿನ ಸಂಘರ್ಷವನ್ನು ಸದ್ಯಕ್ಕೆ ಅಂತ್ಯಗೊಳಿಸುವುದಿಲ್ಲ ಎನ್ನುವ ಸೂಚನೆಯನ್ನು ಚೀನಾ ನೀಡಿದೆ ಎಂದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕಳೆದ 15 ದಿನಗಳಲ್ಲಿ ಗಲ್ವಾನ್‌‌ ಪ್ರದೇಶದಲ್ಲಿ ಚೀನಾ ಸುಮಾರು 100 ಸೇನಾ ಡೇರೆಗಳನ್ನು ಸ್ಥಾಪಿಸಿದೆ. ಜತೆಗೆ, ಬಂಕರ್‌ಗಳನ್ನು ನಿರ್ಮಿಸಲು ಅಗತ್ಯವಿರುವ ಯಂತ್ರಗಳನ್ನು ತರಲಾಗುತ್ತಿದೆಎಂದು ಮೂಲಗಳು ತಿಳಿಸಿವೆ.

ಗಲ್ವಾನ್‌ ಮತ್ತು ಪಾಂಗೊಂಗ್ ತ್ಸೊ ಪ್ರದೇಶದಲ್ಲಿ ಚೀನಾ ಸೇನೆ ನಿಯೋಜಿಸಿದ್ದರಿಂದ ಭಾರತೀಯ ಸೇನೆಯನ್ನು ಸಹ ಸಜ್ಜುಗೊಳಿಸಲಾಗಿದೆ. ಪೂರ್ವ ಲಡಾಕ್‌ನಲ್ಲಿ ಕಳೆದ ಒಂದು ವಾರದಲ್ಲಿ ಹಲವು ಬಾರಿ ಚೀನಾ ಮತ್ತು ಭಾರತದ ಸೇನೆ ನಡುವೆ ಸಂಘರ್ಷಗಳು ನಡೆದಿವೆ. ಆದರೆ, ಅಧಿಕೃತವಾಗಿ ಈ ವಿಷಯವನ್ನು ದೃಢಪಡಿಸಿಲ್ಲ.

ADVERTISEMENT

ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಿಸುತ್ತಿರುವ ಬೆನ್ನಲ್ಲೇ ಇಂಡೊ–ಟಿಬಿಟನ್‌ ಗಡಿ ಪೊಲೀಸ್‌ನ (ಐಟಿಬಿಪಿ) ಯೋಧರನ್ನು ಇತ್ತೀಚಿಗೆ ಚೀನಾ ಸೇನೆ ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಭೂಸೇನೆಮುಖ್ಯಸ್ಥ ನರವಾಣೆಲಡಾಕ್‌‌ಗೆ ಭೇಟಿ
ಭಾರತೀಯ ಸೇನೆಯ ಮುಖ್ಯಸ್ಥಮನೋಜ್‌ ಮುಕುಂದ್‌ ನರವಾಣೆ ಅವರುಶುಕ್ರವಾರ ಲಡಾಕ್‌‌ನ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ, ಹಿರಿಯ ಕಮಾಂಡರ್‌ಗಳೊಂದಿಗೆ ಗಡಿ ಭದ್ರತೆಯ ಸ್ಥಿತಿಗತಿಯ ಮೌಲ್ಯಮಾಪನ ಮಾಡಿದ್ದಾರೆ ಎಂಬ ಸಂಗತಿಬಹಿರಂಗಗೊಂಡಿದೆ.

ಗಡಿ ದಾಟಿಲ್ಲ: ಭಾರತ ಸ್ಪಷ್ಟನೆ
ನವದೆಹಲಿ:
ಲಡಾಕ್‌ ಮತ್ತು ಸಿಕ್ಕಿಂ ವಲಯದ ಗಡಿಯಲ್ಲಿ ಭಾರತೀಯ ಸೇನಾ ಪಡೆಗಳು ಚೀನಾ ಪ್ರದೇಶ‌ ದಾಟಿವೆ ಎನ್ನುವ ಆರೋಪವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಳ್ಳಿಹಾಕಿದೆ.

‘ಪಶ್ಚಿಮ ವಲಯ ಅಥವಾ ಸಿಕ್ಕಿಂ ವಲಯದ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಭಾರತೀಯ ಪಡೆಗಳು ಯಾವುದೇ ಚಟುವಟಿಕೆಗಳನ್ನು ಕೈಗೊಂಡಿಲ್ಲ. ಬದಲಾಗಿ, ಈ ಪ್ರದೇಶದಲ್ಲಿ ಭಾರತೀಯ ಪಡೆಗಳ ಗಸ್ತು ತಿರುಗಲು ಚೀನಾ ಅಡ್ಡಿಪಡಿಸಿತ್ತು’ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ್‌ ಸ್ಪಷ್ಟಪಡಿಸಿದ್ದಾರೆ.

‘ಗಡಿ ವಿಷಯದಲ್ಲಿ ಭಾರತದ ಸೇನಾ ಪಡೆ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. ಗಡಿ ವಿಷಯದ ಸೂಕ್ಷ್ಮಗಳನ್ನು ಅರಿತುಕೊಂಡಿದೆ. ಭಾರತದ ಗಡಿ ವ್ಯಾಪ್ತಿಯ ಒಳಗೆಯೇ ಎಲ್ಲ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ದೇಶದ ಸಾರ್ವಭೌಮತ್ವ ಮತ್ತು ಭದ್ರತೆ ಕಾಪಾಡಲು ಬದ್ಧರಾಗಿದ್ದೇವೆ’ಎಂದು ತಿಳಿಸಿದ್ದಾರೆ.

ಭಾರತ-ಚೀನಾ ಗಡಿ ವಿವಾದವು 3,488 ಕಿ.ಮೀ ಉದ್ದದ ಎಲ್‌ಎಸಿಯನ್ನು ಒಳಗೊಂಡಿದೆ. ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಚೀನಾ ಹೇಳಿಕೊಂಡರೆ, ಭಾರತ ಈ ವಾದವನ್ನು ತಳ್ಳಿಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ತಮ್ಮ ಮೊದಲ ಅನೌಪಚಾರಿಕ ಶೃಂಗಸಭೆಯನ್ನು ಏಪ್ರಿಲ್ 2018ರಲ್ಲಿ ಚೀನಾದ ವುಹಾನ್‌ನಲ್ಲಿ ನಡೆಸಿದ್ದರು.

ಶೃಂಗಸಭೆಯಲ್ಲಿ ಉಭಯ ನಾಯಕರು ತಮ್ಮ ಸೈನಿಕರಿಗೆ ಸಂವಹನಗಳನ್ನು ಬಲಪಡಿಸಲು ‘ಕಾರ್ಯತಂತ್ರದ ಮಾರ್ಗದರ್ಶನ’ ನೀಡಲು ನಿರ್ಧರಿಸಿದ್ದರು.

ಮೋದಿ ಮತ್ತು ಕ್ಸಿ ತಮ್ಮ ಎರಡನೇ ಅನೌಪಚಾರಿಕ ಶೃಂಗಸಭೆಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚೆನ್ನೈನ ಮಾಮಲ್ಲಪುರಂನಲ್ಲಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.