ADVERTISEMENT

ಕಾಶ್ಮೀರಿ ಪಂಡಿತರು ಪ್ರತಿಭಟಿಸುತ್ತಿದ್ದರೆ, ಇತ್ತ ಬಿಜೆಪಿಗರಿಗೆ ಸಂಭ್ರಮ: ರಾಹುಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2022, 8:46 IST
Last Updated 1 ಜೂನ್ 2022, 8:46 IST
 ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಕಾಶ್ಮೀರದಲ್ಲಿ ಪಂಡಿತರು (ಹಿಂದೂಗಳು) ಪ್ರತಿಭಟಿಸುತ್ತಿದ್ದರೆ, ಇತ್ತ ಬಿಜೆಪಿಯವರು 8 ವರ್ಷಗಳ ಸಂಭ್ರಮದಲ್ಲಿ ನಿರತರಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕಾಶ್ಮೀರ ಪಂಡಿತರ ಹತ್ಯೆ ವಿಚಾರವನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಅವರು, ‘ಕಾಶ್ಮೀರದಲ್ಲಿ ಕಳೆದ 5 ತಿಂಗಳಲ್ಲಿ 15 ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, 18 ನಾಗರಿಕರು ಸಾವನ್ನಪ್ಪಿದ್ದಾರೆ. ನಿನ್ನೆಯೂ ಶಿಕ್ಷಕಿಯೊಬ್ಬರ ಹತ್ಯೆಯಾಗಿದೆ. ಕಾಶ್ಮೀರಿ ಪಂಡಿತರು 18 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆದರೆ. ಬಿಜೆಪಿಯವರು 8 ವರ್ಷಗಳ ಸಂಭ್ರಮದಲ್ಲಿ ನಿರತವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

‘ಪ್ರಧಾನಿ ಮೋದಿಯವರೇ, ಇದು ಸಿನಿಮಾ ಅಲ್ಲ, ಇಂದಿನ ಕಾಶ್ಮೀರದ ವಾಸ್ತವ’ ಎಂದು ರಾಹುಲ್‌ ಗುಡುಗಿದ್ದಾರೆ.

ದಕ್ಷಿಣ ಕಾಶ್ಮೀರದ ಅನಂತನಾಗ್‌ ಹಾಗೂ ಕುಲ್ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಮಂಗಳವಾರ ಪಾಕಿಸ್ತಾನದ ಇಬ್ಬರು ಸೇರಿ ಜೈಶೆ–ಮೊಹಮ್ಮದ್‌ (ಜೆಇಎಂ) ಸಂಘಟನೆಯ ಆರು ಉಗ್ರರು ಹತ್ಯೆಯಾಗಿಯಾಗಿದ್ದಾರೆ. ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಹಿಂದೂ ಶಿಕ್ಷಕಿಯನ್ನು ಗುಂಡಿಕ್ಕಿ ಕೊಂದ ಉಗ್ರರು: ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತ (ಹಿಂದೂ) ಶಿಕ್ಷಕಿಯೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ಸಾಂಬಾದ ರಜನಿ ಬಲ್ಲಾ (36) ಮೃತ ಶಿಕ್ಷಕಿ ಎಂದು ಗುರುತಿಸಲಾಗಿದೆ. ಕುಲ್ಗಾಮ್‌ನ ಗೋಪಾಲ್‌ಪೋರಾ ಪ್ರದೇಶದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ರಜನಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.