ADVERTISEMENT

26/11 ಮುಂಬೈ ದಾಳಿಯ ಆರೋಪಿ ರಾಣಾ 18 ದಿನ ಎನ್‌ಐಎ ಕಸ್ಟಡಿಗೆ

ಪಿಟಿಐ
Published 11 ಏಪ್ರಿಲ್ 2025, 2:28 IST
Last Updated 11 ಏಪ್ರಿಲ್ 2025, 2:28 IST
ಎನ್‌ಐಎ
ಎನ್‌ಐಎ   

ನವದೆಹಲಿ: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ತಹವ್ವುರ್ ಹುಸೇನ್ ರಾಣಾನನ್ನು ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) 18 ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ. ಈ ಅವಧಿಯಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ಸಂಪೂರ್ಣ ಪಿತೂರಿಯನ್ನು ಬಯಲು ಮಾಡಲು ಆತನನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.

ಅಮೆರಿಕದಿಂದ ಯಶಸ್ವಿಯಾಗಿ ಹಸ್ತಾಂತರಿಸಲ್ಪಟ್ಟ ನಂತರ ಗುರುವಾರ ಸಂಜೆ ಇಂದಿರಾ ಗಾಂಧಿ ಅಂತರರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಣಾನನ್ನು ಔಪಚಾರಿಕವಾಗಿ ಬಂಧಿಸಿದ ನಂತರ ಭಯೋತ್ಪಾದನಾ ನಿಗ್ರಹ ಸಂಸ್ಥೆಯು ಪಟಿಯಾಲ ಹೌಸ್‌ನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು.

ಎನ್‌ಐಎ 20 ದಿನಗಳ ಕಾಲ ಕಸ್ಟಡಿಗೆ ಕೋರಿತ್ತು. ಆದರೆ, ನ್ಯಾಯಾಲಯವು ರಾಣಾನನ್ನು 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿತು. ನಂತರ, ಆತನನ್ನು ಪಟಿಯಾಲ ಹೌಸ್ ನ್ಯಾಯಾಲಯಗಳ ಸಂಕೀರ್ಣದಿಂದ ದೆಹಲಿ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿಯನ್ನು ಒಳಗೊಂಡ ಭಾರೀ ಭದ್ರತೆಯ ವಾಹನದಲ್ಲಿ ಎನ್‌ಐಎ ಪ್ರಧಾನ ಕಚೇರಿಗೆ ಕರೆತರಲಾಯಿತು.

ADVERTISEMENT

ರಾಣಾನನ್ನು ಇಲ್ಲಿನ ಸಿಜಿಒ ಸಂಕೀರ್ಣದಲ್ಲಿರುವ ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಪ್ರಧಾನ ಕಚೇರಿಯೊಳಗೆ ಅತ್ಯಂತ ಭದ್ರತೆಯ ಕೋಣೆಯಲ್ಲಿ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ರಾಣಾನನ್ನು 18 ದಿನಗಳ ಕಾಲ ಎನ್‌ಐಎ ಕಸ್ಟಡಿಯಲ್ಲಿ ಇರಿಸಲಾಗುವುದು. ಈ ಸಮಯದಲ್ಲಿ 2008ರ ಮುಂಬೈ ದಾಳಿ ಹಿಂದಿನ ಸಂಪೂರ್ಣ ಪಿತೂರಿಯನ್ನು ಬಯಲು ಮಾಡಲು ಸಂಸ್ಥೆ ಅವರನ್ನು ವಿವರವಾಗಿ ಪ್ರಶ್ನಿಸಲಿದೆ’ಎಂದು ನ್ಯಾಯಾಲಯದ ಆದೇಶದ ನಂತರ ತನಿಖಾ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೆಹಲಿಯ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಎನ್‌ಐಎ ಅವರನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಹಲವು ವರ್ಷಗಳ ನಿರಂತರ ಪ್ರಯತ್ನಗಳ ನಂತರ ಅಮೆರಿಕದಿಂದ ಗಡೀಪಾರು ಮಾಡಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ಹಸ್ತಾಂತರ ತಡೆಗೆ ರಾಣಾ ಸಲ್ಲಿಸಿದ್ದ ಮನವಿಯನ್ನು ಅಮೆರಿಕ ಸುಪ್ರೀಂ ಕೋರ್ಟ್ ವಜಾ ಮಾಡಿದ ನಂತರ ಇದು ಸಾಧ್ಯವಾಗಿದೆ.

ಗುರುವಾರ ಸಂಜೆ ಲಾಸ್ ಏಂಜಲೀಸ್‌ನಿಂದ ವಿಶೇಷ ವಿಮಾನದಲ್ಲಿ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳು ರಾಣಾನನ್ನು ದೆಹಲಿಗೆ ಕರೆತಂದವು.

ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯದ ಸಂಘಟಿತ ಪ್ರಯತ್ನಗಳು ಮತ್ತು ಸಂಬಂಧಿತ ಅಧಿಕಾರಿಗಳ ಸಹಯೋಗದಲ್ಲಿ ರಾಣಾ ಬಂಧನಕ್ಕೆ ಅಗತ್ಯವಿದ್ದ ಸರೆಂಡರ್ ವಾರೆಂಟ್ ಅನ್ನು ಸಿದ್ಧಪಡಿಸಿ, ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ ಎಂದೂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.