ಸಾಂದರ್ಭಿಕ ಚಿತ್ರ
ಪ್ರಜಾವಾಣಿ ಚಿತ್ರ
ಹೈದರಾಬಾದ್: ಪವಿತ್ರ ರಂಜಾನ್ ಮಾಸದಲ್ಲಿ ಮುಸ್ಲಿಂ ನೌಕರರು ಒಂದು ಗಂಟೆ ಬೇಗ ಕರ್ತವ್ಯದಿಂದ ತೆರಳಲು ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಿರುವ ತೆಲಂಗಾಣ ಸರ್ಕಾರದ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಸರ್ಕಾರವು ಇಂಥ ಸೌಕರ್ಯವನ್ನು ಹಿಂದೂಗಳಿಗೆ ನೀಡದಿರುವುದು ನಿಜಕ್ಕೂ ಆಘಾತಕಾರಿ. ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕರಾಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ಜರಿದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇಂಥ ಕ್ರಮವೇನೂ ರಾಜ್ಯದಲ್ಲಿ ಹೊಸತಲ್ಲ ಎಂದಿದೆ.
‘ಈ ವರ್ಷ ಮಾರ್ಚ್ 3ರಿಂದ 31ರವರೆಗೆ ಆಚರಿಸಲಾಗುವ ರಂಜಾನ್ ಮಾಸದಲ್ಲಿ ಮುಸ್ಲಿಂ ನೌಕರರು ಸಂಜೆ 4ಕ್ಕೆ ಮನೆಗೆ ತೆರಳಲು ಸರ್ಕಾರ ಅನುವು ಮಾಡಿಕೊಟ್ಟಿದೆ. ತುರ್ತು ಸೇವೆಯಲ್ಲಿರುವವರಿಗೆ ಹಾಗೂ ಸರ್ಕಾರದ ಕರ್ತವ್ಯದಲ್ಲಿ ತೀರಾ ಅಗತ್ಯ ಇರುವವರಿಗೆ ಇದು ಅನ್ವಯಿಸದು’ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರದ ಈ ಕ್ರಮವನ್ನು ಬಿಜೆಪಿ ಶಾಸಕ ರಾಜಾ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ‘ಮುಸ್ಲಿಮರ ಹಬ್ಬಕ್ಕೆ ಇಂಥ ರಿಯಾಯಿತಿ ನೀಡುವ ತೆಲಂಗಾಣ ಸರ್ಕಾರವು, ಹಿಂದೂಗಳನ್ನು ಕಡೆಗಣಿಸಿದೆ. ಎಲ್ಲರಿಗೂ ಸಮಾನ ಹಕ್ಕು ಮತ್ತು ಅವಕಾಶ ಸಿಗಬೇಕು. ಇಲ್ಲವೆಂದರೆ ಯಾರಿಗೂ ಸಿಗಬಾರದು’ ಎಂದಿದ್ದಾರೆ. ಈ ಕುರಿತು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಲ್ಪಸಂಖ್ಯಾತ ಖಾತೆ ಸಚಿವ ಮೊಹಮ್ಮದ್ ಅಲಿ ಶಬ್ಬೀರ್, ‘ಇದೇನು ಹೊಸ ಕಾನೂನಲ್ಲ. ಬಿಆರ್‌ಎಸ್ ಪಕ್ಷ ಆಡಳಿತದಲ್ಲಿದ್ದಾಗಿಂದಲೂ ಜಾರಿಯಲ್ಲಿದೆ. ಬಿಜೆಪಿ ಆಡಳಿತದಲ್ಲಿರುವ ಹಲವು ರಾಜ್ಯಗಳಲ್ಲಿ ಇಂಥ ಸೌಕರ್ಯ ಜಾರಿಯಲ್ಲಿದೆ. ಇಂಥ ಆದೇಶ ಹೊರಡಿಸಿದ್ದು ಇದೇ ಮೊದಲಲ್ಲ ಮತ್ತು ತೆಲಂಗಾಣವೇ ಮೊದಲ ರಾಜ್ಯವಲ್ಲ. ಗಣೇಶ ಚತುರ್ಥಿ ಮತ್ತು ಬೊನಾಲು ಹಬ್ಬದಲ್ಲೂ ಇಂಥ ಸೌಕರ್ಯವನ್ನು ನೀಡಲಾಗಿದೆ. ರಾಜ್ಯದ ಜನರು ಹಬ್ಬದ ಸಂದರ್ಭದಲ್ಲಿ ಅನುಕೂಲ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.