ADVERTISEMENT

ಕೊರೊನಾ ಸಂಕಷ್ಟದಲ್ಲೂ ಕೆಲಸದ ಹಾದಿ ಆರಿಸಿಕೊಂಡ ಎಲ್ಲ ಸಂಸದರಿಗೆ ಧನ್ಯವಾದಗಳು: ಮೋದಿ

ಏಜೆನ್ಸೀಸ್
Published 14 ಸೆಪ್ಟೆಂಬರ್ 2020, 4:54 IST
Last Updated 14 ಸೆಪ್ಟೆಂಬರ್ 2020, 4:54 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕೊರೊನಾವೈರಸ್‌ ಸಂಕಷ್ಟದ ಸಮಯದಲ್ಲೂ ಕೆಲಸದ ಹಾದಿಯನ್ನು ಆಯ್ಕೆ ಮಾಡಿಕೊಂಡ ಎಲ್ಲ ಸಂಸದರಿಗೆ ಧನ್ಯವಾದಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ. ಕೋವಿಡ್‌–19 ಪಿಡುಗಿನ ಕರಿಛಾಯೆ ನಡುವೆ ಇಂದಿನಿಂದ ಸಂಸತ್‌ ಅಧಿವೇಶನ ಆರಂಭವಾಗಲಿದೆ.

ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ‘ಇಂದಿನಿಂದ ಮುಂಗಾರು ಅಧಿವೇಶನ ಆರಂಭವಾಗಲಿದೆ. ಕೊರೊನಾವೈರಸ್‌ ಮತ್ತು ಜವಾಬ್ದಾರಿ ಎರಡೂ ಇವೆ.ಎಲ್ಲ ಸಂಸದರು ಜವಾಬ್ದಾರಿಯ ಪಥವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಅದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಕೊರೊನಾ ಸಂದರ್ಭದಿಂದಾಗಿ ಬಜೆಟ್ ಅಧಿವೇಶನವೂ ಮಧ್ಯದಲ್ಲೇ ನಿಂತಿತು. ಈ ಬಾರಿಯ ರಾಜ್ಯಸಭೆ ಮತ್ತು ಲೋಕಸಭೆ ಅಧಿವೇಶನದ ಸಮಯವನ್ನೂ ಬದಲಿಸಬೇಕಾಯಿತು. ಶನಿವಾರ ಮತ್ತು ಭಾನುವಾರದ ರಜಾದಿನಗಳನ್ನೂ ರದ್ದುಪಡಿಸಲಾಗಿದೆ’ ಎಂದು ಹೇಳಿದ್ದಾರೆ.

‘ಅಧಿವೇಶನದಲ್ಲಿ ಸಾಕಷ್ಟು ಮುಖ್ಯ ವಿಚಾರಗಳನ್ನು ಚರ್ಚೆ ಮಾಡುವುದಿದೆ, ನಿರ್ಧಾರಗಳನ್ನು ತೆಗೆದುಕೊಳ್ಳುವುದಿದೆ. ಸಂಸತ್ತಿನಲ್ಲಿ ನಡೆಯುವ ವೈವಿಧ್ಯಮಯ ಚರ್ಚೆಯು ದೇಶಕ್ಕೆ ಹೆಚ್ಚು ಅನುಕೂಲ ಮಾಡಿಕೊಡಲಿದೆ ಎಂಬುದು ನಮ್ಮ ಅನುಭವ. ಈ ಬಾರಿಯೂ ನಾವು ಅದರ ಮೌಲ್ಯವರ್ಧನೆ ಮಾಡಲಿದ್ದೇವೆ. ಕೊರೊನಾ ವೈರಸ್‌ ಸಂದರ್ಭವನ್ನು ಗಮನದಲ್ಲಿರಿಸಿ ನಾವೆಲ್ಲರೂ ಮಾರ್ಗಸೂಚಿಗಳನ್ನು ಪಾಲಿಸಬೇಕು’ ಎಂದು ಮನವಿ ಮಾಡಿದ್ದಾರೆ

ADVERTISEMENT

ಕೋವಿಡ್–19 ಅನ್ನು ಕೊನೆಗಾಣಿಸಲು ಶೀಘ್ರವೇ ಲಸಿಕೆ ಸಿದ್ಧವಾಗಲಿದೆ ಮತ್ತು ಬಿಕ್ಕಟ್ಟು ಹೊರಬರಲಿದ್ದೇವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ18 ದಿನ ಮುಂಗಾರು ಅಧಿವೇಶನ
ಸಂಸತ್ತಿನ ಮುಂಗಾರು ಅಧಿವೇಶನ ಸೋಮವಾರದಿಂದ ಆರಂಭವಾಗಿ18 ದಿನ ನಡೆಯಲಿದೆ.ಸಾಂಕ್ರಾಮಿಕದ ಸಂದರ್ಭದಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿರುವುದರಿಂದ ಎಲ್ಲರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೋವಿಡ್‌ ಪರೀಕ್ಷೆಯಲ್ಲಿ ರೋಗ ಇಲ್ಲ ಎಂದು ದೃಢಪಟ್ಟವರಿಗೆ ಮಾತ್ರ ಸಂಸತ್ತಿಗೆ ಪ್ರವೇಶ ಇದೆ. ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.ಸಂಸದರು, ಸಿಬ್ಬಂದಿ, ಮಾಧ್ಯಮ ಪ್ರತಿನಿಧಿಗಳು ಸೇರಿ ನಾಲ್ಕು ಸಾವಿರಕ್ಕೂ ಹೆಚ್ಚು ಜನರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ.

ರಾಜ್ಯಸಭೆ ಮತ್ತುಲೋಕಸಭೆಯು ಎರಡು ಪಾಳಿಗಳಲ್ಲಿ ಸಭೆ ಸೇರಲಿವೆ.ರಾಜ್ಯಸಭೆಯ ಕಲಾಪವು ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಮತ್ತು ಲೋಕಸಭೆಯ ಕಲಾಪವು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.