ADVERTISEMENT

ತಾಯಿಯ ಟ್ವೀಟ್‌ಗೆ ಸ್ಪಂದನೆ; ಅಳುತ್ತಿದ್ದ ಮಗುವಿಗೆ ಹಾಲು ಪೂರೈಸಿದ ರೈಲ್ವೆ ಆಡಳಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2022, 10:15 IST
Last Updated 18 ಜನವರಿ 2022, 10:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾನ್ಪುರದ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಸುಲ್ತಾನ್‌ಪುರಕ್ಕೆ ಹೋಗುತ್ತಿದ್ದ ಎಲ್‌ಟಿಟಿ ಎಕ್ಸ್‌ಪ್ರೆಸ್‌ನ (12143) ಎಸಿ-3 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಅಂಜಲಿ ತಿವಾರಿ ಅವರ ಎಂಟು ತಿಂಗಳ ಮಗು ಹಸಿವಿನಿಂದ ಅಳಲು ಪ್ರಾರಂಭಿಸಿತು. ಈ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ ನಂತರ ಅಂಜಲಿ, ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿದ 23 ನಿಮಿಷಗಳ ನಂತರ, ರೈಲ್ವೆ ಆಡಳಿತವು ಕಾನ್ಪುರ ಸೆಂಟ್ರಲ್‌ನಲ್ಲಿ ಮಗುವಿಗೆ ಹಾಲು ನೀಡಿದೆ.

ಮಗುವನ್ನು ಸಮಾಧಾನ ಪಡಿಸಲು ಅಂಜಲಿ ಪ್ರಯತ್ನಿಸಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಮಗು ಅಳುವನ್ನು ನಿಲ್ಲಿಸದ ಕಾರಣ 02.52ಕ್ಕೆ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಅಷ್ಟರೊಳಗಾಗಲೇ ರೈಲು ಭೀಮಸೇನ ನಿಲ್ದಾಣದಿಂದ ಹೊರಟಿದೆ. ಈ ಟ್ವೀಟ್ ಅನ್ನು ನೋಡಿದ ರೈಲ್ವೆ ಆಡಳಿತವು ಸಕ್ರಿಯವಾಗಿದೆ.

ಕಾನ್ಪುರ ಕೇಂದ್ರದ ಉಪ ಸಿಟಿಎಂ ಹಿಮಾಂಶು ಶೇಖರ್ ಉಪಾಧ್ಯಾಯ ಅವರ ಸೂಚನೆ ಮೇರೆಗೆ, ಎಸಿಎಂ ಸಂತೋಷ್ ತ್ರಿಪಾಠಿ ಮಗುವಿಗೆ ಹಾಲಿನ ವ್ಯವಸ್ಥೆ ಮಾಡಿದ್ದಾರೆ. ಕಾನ್ಪುರ ಸೆಂಟ್ರಲ್‌ನ ಪ್ಲಾಟ್‌ಫಾರ್ಮ್ ನಂಬರ್ ಒಂಬತ್ತಕ್ಕೆ ರೈಲು ಸಂಜೆ 15.15ಕ್ಕೆ ತಲುಪಿದೆ. ಈ ವೇಳೆ ಕೋಚ್‌ಗೆ ಹೋಗಿ ಮಗುವಿಗೆ ಬಿಸಿ ಹಾಲು ನೀಡಿದ್ದಾರೆ.

ADVERTISEMENT

ಸಂತೋಷ್ ತ್ರಿಪಾಠಿ ಅವರು ಅಂಜಲಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದಾಗ, ತಮಗೆ ಮಾಡಿದ ಈ ಸಹಾಯಕ್ಕಾಗಿ ರೈಲ್ವೆ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದಾದ ಬಳಿಕ ಅದೇ ರೈಲು ಕಾನ್ಪುರದಿಂದ ಸುಲ್ತಾನಪುರಕ್ಕೆ 8 ನಿಮಿಷಗಳ ನಂತರ ಹೊರಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.