ADVERTISEMENT

ಬಿಹಾರಿಗಳಲ್ಲಿ ವಿಶೇಷ ರೋಗನಿರೋಧಕ ಶಕ್ತಿ ಇದೆಯೇ? ತಜ್ಞರ ತಲೆ ಕೆಡಿಸಿದೆ ಕೋವಿಡ್‌

ಕಲ್ಯಾಣ್‌ ರೇ
Published 29 ಅಕ್ಟೋಬರ್ 2020, 15:27 IST
Last Updated 29 ಅಕ್ಟೋಬರ್ 2020, 15:27 IST
ಬಿಹಾರದಲ್ಲಿ ವಲಸಿಗರ ತಪಾಸಣೆ ಮಾಡುತ್ತಿರುವುದು (ಪಿಟಿಐ ಚಿತ್ರ)
ಬಿಹಾರದಲ್ಲಿ ವಲಸಿಗರ ತಪಾಸಣೆ ಮಾಡುತ್ತಿರುವುದು (ಪಿಟಿಐ ಚಿತ್ರ)   

ನವದೆಹಲಿ: ಬಿಹಾರಿಗಳಿಗೆ ಕೋವಿಡ್‌ ವಿರುದ್ಧ ವಿಶೇಷವಾದ ರೋಗ ನಿರೋಧಕ ಶಕ್ತಿ ಇದೆಯೇ? ಸುಮಾರು 10 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯವಾದ ಬಿಹಾರದ ಕೋವಿಡ್-19 ಸಂಖ್ಯೆಗಳು ಎಷ್ಟು ವಿಶ್ವಾಸಾರ್ಹ?

ಮಾಸ್ಕ್‌ ಧರಿಸುವುದರಲ್ಲಿ, ದೈಹಿಕ ಅಂತರ ಪಾಲಿಸುವುದರಲ್ಲಿ ಕಾಳಜಿ ವಹಿಸದ, ಅತಿರೇಕದ ಕೋವಿಡ್ ವರ್ತನೆಗಳು ಮತ್ತು ರಾಜ್ಯದ ಕಳಪೆ ವೈದ್ಯಕೀಯ ಮೂಲಸೌಕರ್ಯಗಳ ಹೊರತಾಗಿಯೂ ಬಿಹಾರದಲ್ಲಿ ಕಡಿಮೆ ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ತಜ್ಞರಲ್ಲಿ ಮೂಡಿರುವ ಪ್ರಶ್ನೆಗಳಿವು.

'ಬಿಹಾರ ಒಂದರಲ್ಲೇ ಒಂದು ಕೋಟಿ ( ದೇಶದ ಶೇ. 10ರಷ್ಟು) ಕೋವಿಡ್‌ ಪರೀಕ್ಷೆಗಳನ್ನು ಮಾಡಲಾಗಿದೆ. ಆದರೆ, ಕಳೆದ ಎರಡು ತಿಂಗಳಲ್ಲಿ ಶೇ. 5ರಷ್ಟು ಪಾಸಿಟಿವ್‌ ಪ್ರಕರಣಗಳಷ್ಟೇ ಅಲ್ಲಿ ವರದಿಯಾಗಿವೆ. ಸದ್ಯ ಅದು ಶೇ. 2ಕ್ಕೆ ಕುಸಿದಿದೆ. ಹೀಗೆ ಬಿಹಾರದಲ್ಲಿ ಪಾಸಿಟಿವ್‌ಪ್ರಕರಣಗಳಲ್ಲಿ ನಿರಂತರ ಕುಸಿತ ಕಾಣುತ್ತಿದೆ.

ADVERTISEMENT

ಸಂಪನ್ಮೂಲಗಳ ಕೊರತೆ ಎದುರಿಸುತ್ತಿರುವ ರಾಜ್ಯವೊಂದರ ಈ ಅಂಕಿ ಸಂಖ್ಯೆಗಳು ಗಮನಾರ್ಹ. ಆದರೆ, ಇದು ನಿಜವೇ?' ಎಂದು ಪ್ರಶ್ನೆ ಕೇಳಿದ್ದಾರೆ ಆರೋಗ್ಯ ಅರ್ಥಶಾಸ್ತ್ರಜ್ಞ, ಕೋಯಿಕ್ಕೋಡ್‌ನ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌'ನ ಸಂದರ್ಶಕ ಅಧ್ಯಾಪಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರ ರಿಜೊ ಜಾನ್.

ಆಶ್ಚರ್ಯಕರ ಸಂಗತಿಯೆಂದರೆ ಸಾವಿರಾರು ವಲಸೆ ಕಾರ್ಮಿಕರು ರಾಜ್ಯಕ್ಕೆ ಮರಳಿದ ನಂತರ ಆಗಸ್ಟ್‌ನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾದವಾದರೂ, ನಂತರದ ದಿನಗಳಲ್ಲಿ ಪ್ರಕರಣಗಳಲ್ಲಿ ನಿರಂತರ ಕುಸಿತವಾಗುತ್ತಿದೆ.

ಲಾಕ್‌ಡೌನ್ ಪೂರ್ವ ದಿನಗಳಂತೆ ಬಿಹಾರದಲ್ಲಿ ಜನರ ಚಲನಶೀಲತೆಗೆ ಯಾವುದೇ ತೊಡಕಿಲ್ಲ. ಆದರೆ, ಇದರ ಪರಿಣಾಮ ಕೋವಿಡ್ -19 ಸಂಖ್ಯೆಗಳಲ್ಲಿ ಕಾಣಿಸುತ್ತಿಲ್ಲ.

'ಕಾಗದಗಳ ಮೇಲಿರುವ ಸಂಖ್ಯೆಯು ವಾಸ್ತವವಾಗಿ ನಿಜವೇ ಆಗಿದ್ದರೆ ಅದು ಸಂತೋಷದ ವಿಚಾರ. ಆದರೆ, ಜನರ ತೀವ್ರ ಚಲನಶೀಲತೆ ಮತ್ತು ಅತಿರೇಕದ ವರ್ತನೆಗಳ ಹೊರತಾಗಿಯೂ ಬಿಹಾರದಲ್ಲಿ ಏಕೆ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡಿಲ್ಲ ಎಂಬುದರ ಬಗ್ಗೆ ಅರ್ಥಮಾಡಿಕೊಳ್ಳಲು ನಾವು ವಿಫಲವಾಗಿದ್ದೇವೆ,' ಎಂದು ಎಂದು ಜಾನ್ 'ಪ್ರಜಾವಾಣಿ' ಸೋದರ ಪತ್ರಿಕೆ 'ಡೆಕ್ಕನ್‌ ಹೆರಾಲ್ಡ್‌'ಗೆ ತಿಳಿಸಿದ್ದಾರೆ.

ಸದ್ಯ ಬಿಹಾರದಲ್ಲಿ ಒಟ್ಟಾರೆ 2,14,946 ಕೋವಿಡ್‌ ಪ್ರಕರಣಗಳಿದ್ದು, 1076 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.