ADVERTISEMENT

ಮಹಾ ಬಂಡಾಯ: ಶಿವಸೇನೆ ನಾಯಕ ಸಂಜಯ್ ರಾವುತ್ ಸ್ಫೋಟಕ ಟ್ವೀಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜೂನ್ 2022, 6:39 IST
Last Updated 22 ಜೂನ್ 2022, 6:39 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿ ಸರ್ಕಾರಕ್ಕೆ ಶಿವಸೇನೆಯ ಬಂಡುಕೋರ ಶಾಸಕರಿಂದ ಸಂಕಷ್ಟ ಎದುರಾಗಿರುವ ಹೊತ್ತಿನಲ್ಲಿ ಶಿವಸೇನೆ ಉನ್ನತ ನಾಯಕ ಹಾಗೂ ಸಂಸದಸಂಜಯ್ ರಾವುತ್ ಮಾಡಿರುವ ಟ್ವೀಟ್ ಭಾರೀ ಸಂಚಲನಕ್ಕೆ ಕಾರಣವಾಗಿದೆ.

‘ವಿಧಾನಸಭೆಯ ವಿಸರ್ಜನೆಯತ್ತ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಪಯಣ’ ಎಂದು ಮರಾಠಿಯಲ್ಲಿ ಒಂದೇ ಸಾಲಿನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಈಗ ಸಂಚಲನಕ್ಕೆ ಕಾರಣವಾಗಿದ್ದು, ಮಹಾರಾಷ್ಟ್ರ ಎಂವಿಎಸರ್ಕಾರ ಪತನದ ಹಾದಿ ಹಿಡಿಯಿತುಎನ್ನಲಾಗುತ್ತಿದೆ.

ADVERTISEMENT

ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾವುತ್,ಬಂಡಾಯ ಶಾಸಕರ ಜತೆ ಮಾತುಕತೆ ನಡೆಯುತ್ತಿದ್ದು, ಅವರೆಲ್ಲ ಶಿವಸೇನಾದಲ್ಲೇ ಇರಲಿದ್ದಾರೆ ಎಂದು ಹೇಳಿದ್ದರು.

ನಮ್ಮ ಪಕ್ಷವು ಹೋರಾಟದ ಹಿನ್ನೆಲೆಯಲ್ಲಿ ರಚನೆಯಾಗಿದೆ. ನಾವು ಸತತ ಹೋರಾಟ ಮಾಡಲಿದ್ದೇವೆ. ಹೆಚ್ಚೆಂದರೆ ಅಧಿಕಾರ ಕಳೆದುಕೊಳ್ಳಬಹುದು. ಆದರೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಏಕನಾಥ್ ಶಿಂಧೆ ನಮ್ಮ ಪಕ್ಷದ ಅತಿ ಹಳೆಯ ಸದಸ್ಯ. ಅವರು ನಮ್ಮ ಸ್ನೇಹಿತರು. ನಾವು ದಶಕಗಳಿಂದ ಜತೆಯಾಗಿ ಕೆಲಸ ಮಾಡಿದ್ದೇವೆ. ಅಷ್ಟು ಸುಲಭವಾಗಿ ಬೇರೆಯಾಗುವುದು ಅವರಿಗೂ ನಮಗೂ ಸುಲಭವಲ್ಲ. ಅವರ ಜತೆ ಇಂದು ಬೆಳಿಗ್ಗೆ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದೇನೆ. ಪಕ್ಷದ ಅಧ್ಯಕ್ಷರಿಗೂ ಈ ಬಗ್ಗೆ ತಿಳಿಸಲಾಗಿದೆ ಎಂದು ರಾವುತ್ ತಿಳಿಸಿದ್ದಾರೆ.

ಈ ಮಧ್ಯೆ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ನಿವಾಸಕ್ಕೆ ಮಹಾರಾಷ್ಟ್ರ ಸಚಿವ ಬಾಳಾಸಾಹೇಬ್ ಪಾಟೀಲ್ ಭೇಟಿ ನೀಡಿದ್ದಾರೆ.

ಈಗಾಗಲೇಮಹಾರಾಷ್ಟ್ರ ಸರ್ಕಾರದ ರಾಜಕೀಯ ಅಸ್ಥಿರತೆ ಕುರಿತಂತೆ ಹಲವು ಬೆಳವಣಿಗೆಗಳು ನಡೆದಿದ್ದು, ಬುಧವಾರ ಮಧ್ಯಾಹ್ನ ಸಿಎಂ ಠಾಕ್ರೆ ಅವರು ರಾಜ್ಯ ಸಚಿವ ಸಂಪುಟ ಸಭೆ ಕರೆದಿದ್ದಾರೆ.

ಸಚಿವ ಏಕನಾಥ್ ಶಿಂಧೆ ಅವರು ತಮಗೆ 40 ಶಾಸಕರ ಬೆಂಬಲ ಇದೆ ಎಂದು ತಿಳಿಸಿದ್ದಾರೆ.ಸೂರತ್‌ನಿಂದ ಶಿಂಧೆ ಮತ್ತು ಬೆಂಬಲಿಗ ಶಾಸಕರು, ಚಾರ್ಟರ್ಡ್ ವಿಮಾನದಲ್ಲಿ ಗುವಾಹಟಿಗೆ ತೆರಳಿದ್ದಾರೆ.ಅವರು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.