ADVERTISEMENT

ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯ ಎಷ್ಟು ಪುರಾಣ ಪ್ರಸಿದ್ಧವೋ ಅಷ್ಟೇ ನಿಗೂಢ!

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 3:44 IST
Last Updated 14 ಜುಲೈ 2020, 3:44 IST
ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನ
ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನ   

ತಿರುವನಂತಪುರ ಪದ್ಮನಾಭಸ್ವಾಮಿ ದೇವಾಲಯದ ಆಡಳಿ ತದ ಹಕ್ಕು ತಿರುವಾಂಕೂರು ರಾಜ ಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ನೀಡಿದೆ. ‘ದೇವಾಲಯದ ಆಡಳಿತವನ್ನು ರಾಜ್ಯ ಸರ್ಕಾರ ನಿಯಂತ್ರಣಕ್ಕೆ ತೆಗೆದು ಕೊಳ್ಳಬೇಕು’ ಎಂದು 2011ರಲ್ಲಿ ಕೇರಳ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಕೇರಳದ ತಿರುವನಂತಪುರದಲ್ಲಿರುವ ಅನಂತಪದ್ಮನಾಭಸ್ವಾಮಿ ದೇವಸ್ಥಾನವು ಭಾರತದ ಅತ್ಯಂತ ಶ್ರೀಮಂತ ದೇಗುಲ. ಇಲ್ಲಿನ ನೆಲಮಾಳಿಗೆಯಲ್ಲಿ ಇರುವ ಆರು ಖಜಾನೆ ಕೋಣೆಗಳ ಪೈಕಿ ಐದರಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾದ ಬಳಿಕ ಈ ದೇವಸ್ಥಾನವು ಇಡೀ ದೇಶದ ಗಮನ ಸೆಳೆದಿದೆ. ‘ಬಿ’ ಕೋಣೆಯನ್ನು ಇನ್ನೂ ತೆರೆಯಲಾಗಿಲ್ಲ. ಇಲ್ಲಿ ಅಪಾರ ಚಿನ್ನಾಭರಣ ಇದೆ ಎಂದು ಊಹಿಸಲಾಗಿದೆ.

ತಿರುವನಂತಪುರಕ್ಕೆ ಆ ಹೆಸರು ಬರಲು ಅನಂತ ಪದ್ಮನಾಭಸ್ವಾಮಿಯೇ ಕಾರಣವಂತೆ. ವಿಷ್ಣುವಿನ ಸ್ವರೂಪವಾದ ಅನಂತ ಪದ್ಮನಾಭಸ್ವಾಮಿಯ ಬೃಹತ್ ಆಕಾರವನ್ನು ಇಲ್ಲಿ ಕಾಣಬಹುದು. ಪ್ರತಿಮೆಯು ಶಯನಾವಸ್ಥೆಯಲ್ಲಿ ಇರುವುದರಿಂದ ಅನಂತ ಶಯನ ಎಂದೂ ಕರೆಲಾಗಿದೆ. ತಲೆಯ ಮೇಲೆ ಐದು ಹೆಡೆಗಳ ಸರ್ಪವನ್ನು ಕಾಣಬಹುದು. ಗರ್ಭಗುಡಿಗೆ ಮೂರು ದ್ವಾರಗಳಿವೆ. ಆ ಮೂರೂ ದ್ವಾರಗಳ ಮೂಲಕವಷ್ಟೇ ದೇವರ ಪೂರ್ಣ ದರ್ಶನ ಪಡೆಯಲು ಸಾಧ್ಯ.

ಪದ್ಮನಾಭನ ಜೊತೆಗೆ ಲಕ್ಷ್ಮಿ (ಶ್ರೀದೇವಿ), ಭೂದೇವಿ ಇದ್ದಾರೆ. ಅನಂತ ಪದ್ಮನಾಭ ವಿಗ್ರಹದ ಬಲಗೈ ಶಿವಲಿಂಗದ ಮೇಲೆ ಚಾಚಿಕೊಂಡಿರುವುದು ಇಲ್ಲಿನ ವಿಶೇಷತೆಗಳಲ್ಲೊಂದು. ಮಾರ್ಕಂಡೇಯ ಮುನಿ, ಗರುಡ, ನಾರದ, ಸೂರ್ಯ, ಚಂದ್ರ, ಸಪ್ತರ್ಷಿ ಮೊದಲಾದ ವಿಗ್ರಹಗಳು ಇಲ್ಲಿವೆ. ಮುಖ್ಯವಿಗ್ರಹವನ್ನು ನೇಪಾಳದ ಗಂಡಕಿ ನದಿಯಲ್ಲಿ ಸಿಕ್ಕ 1,20,008 ಸಾಲಿಗ್ರಾಮಗಳನ್ನು ಬಳಸಿ ನಿರ್ಮಿಸಲಾಗಿದ್ದು, ವಿಗ್ರಹದ ಮೇಲೆ ಕಟುಸರ್ಕರ ಯೋಗಂ ಎಂಬ ಆಯುರ್ವೇದದ ಲೇಪನವನ್ನು ಮಾಡಲಾಗಿದೆ ಎಂಬ ಪ್ರತೀತಿ ಇದೆ.

ಬ್ರಹ್ಮ ಪುರಾಣ, ಮತ್ಸ್ಯ ಪುರಾಣ, ವರಾಹ ಪುರಾಣ, ಸ್ಕಂದ ಪುರಾಣ, ಪದ್ಮ ಪುರಾಣ, ವಾಯು ಪುರಾಣ, ಭಗವತಿ ಪುರಾಣ ಮತ್ತು ಮಹಾಭಾರತದಲ್ಲೂ ದೇವಸ್ಥಾನದ ಉಲ್ಲೇಖವಿದೆ ಎಂದು ಹೇಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.