ADVERTISEMENT

ಪ್ರಿಯಾಂಕಾ ಗಾಂಧಿ ಮನೆಯಲ್ಲಿ ನಡೆದ ಭದ್ರತಾ ವೈಫಲ್ಯ ಕಾಕತಾಳೀಯ: ಅಮಿತ್‌ ಶಾ

ತನಿಖೆಗೆ ಆದೇಶಿಸಲಾಗಿದೆ ಎಂದ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 17:34 IST
Last Updated 3 ಡಿಸೆಂಬರ್ 2019, 17:34 IST
   

ನವದೆಹಲಿ: ಕಳೆದ ವಾರ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಮನೆಯಲ್ಲಿ ನಡೆದ ಭದ್ರತಾ ವೈಫಲ್ಯ ಕಾಕತಾಳೀಯವೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

‘ಪ್ರಿಯಾಂಕಾ ಅವರ ಮನೆಗೆ ಕಪ್ಪು ಬಣ್ಣದ ಟಾಟಾ ಸಫಾರಿ ವಾಹನದಲ್ಲಿ ರಾಹುಲ್‌ ಗಾಂಧಿ ಅವರು ಬರಲಿದ್ದಾರೆ ಎಂಬ ಮಾಹಿತಿಯನ್ನು ಭದ್ರತಾ ಪಡೆಯ ಸಿಬ್ಬಂದಿಗೆ ನೀಡಲಾಗಿತ್ತು. ಆದರೆ, ಅಂದು ರಾಹುಲ್‌ ಬದಲು, ಅಂಥದ್ದೇ ವಾಹನದಲ್ಲಿ ಉತ್ತರಪ್ರದೇಶದ ಮೀರಠ್‌ನಿಂದ ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಬಂದಿದ್ದರು. ರಾಹುಲ್‌ ಗಾಂಧಿಯೇ ಬಂದಿರಬೇಕು ಎಂದು ಭಾವಿಸಿ ಅವರನ್ನು ಒಳಗೆ ಬಿಡಲಾಗಿತ್ತು ಎಂದು ಭದ್ರತಾ ಪಡೆಯವರು ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ನೆಹರೂ–ಗಾಂಧಿ ಪರಿವಾರದ ಮೂವರಿಗೆ ‘ಝಡ್‌ ಪ್ಲಸ್‌’ ಶ್ರೇಣಿಯ ಭದ್ರತೆ ನೀಡಲಾಗಿದೆ. ಅವರಿಗಾಗಿ ಆಂಬುಲೆನ್ಸ್‌ಅನ್ನೂ ಒದಗಿಸಲಾಗಿದೆ. ಹಿಂದೆ ಎಸ್‌ಪಿಜಿಯ ಭಾಗವಾಗಿದ್ದವರೇ ಈಗ ಅವರ ರಕ್ಷಣೆಯಲ್ಲಿ ನಿರತರಾಗಿದ್ದಾರೆ ಎಂದು ಶಾ ತಿಳಿಸಿದರು.

ADVERTISEMENT

ಬಿಜೆಪಿಯು ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಎಡಪಕ್ಷಗಳಿಗೆ ಪ್ರತ್ಯುತ್ತರ ನೀಡಿದ ಶಾ, ‘ಕೇರಳದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ನ 120 ಮಂದಿ ಕಾರ್ಯಕರ್ತರ ಹತ್ಯೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.