ADVERTISEMENT

ಭೀಕರ ಘಟನೆಗಳ ವರದಿ ವೇಳೆ ಎಚ್ಚರಿಕೆ ವಹಿಸುವಂತೆ ವಾಹಿನಿಗಳಿಗೆ ಸೂಚನೆ

ಏಜೆನ್ಸೀಸ್
Published 9 ಜನವರಿ 2023, 10:47 IST
Last Updated 9 ಜನವರಿ 2023, 10:47 IST
   

ನವದೆಹಲಿ: ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲಿನ ದೌರ್ಜನ್ಯ ಸೇರಿದಂತೆ ಅಪಘಾತ, ಸಾವು ಮತ್ತು ಹಿಂಸಾಚಾರದ ಘಟನೆಗಳನ್ನು ಭೀಕರವಾಗಿ ವರದಿ ಮಾಡಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ಖಾಸಗಿ ಸುದ್ದಿ ವಾಹಿನಿಗಳಿಗೆ ಎಚ್ಚರಿಕೆ ನೀಡಿದೆ.

ಇಂತಹ ಘಟನೆಗಳನ್ನು ವರದಿ ಮಾಡುವಾಗ ಸಾಮಾಜಿಕ ಪ್ರಜ್ಞೆ ಮರೆಯಬಾರದು ಎಂದು ಸಚಿವಾಲಯ ತಿಳಿಸಿದೆ.

ಈ ಸಂಬಂಧ ವಿವರವಾದ ಸಲಹಾ ಪತ್ರ ಬಿಡುಗಡೆಗೊಳಿಸಿರುವ ಸಚಿವಾಲಯ, ಹಲವಾರು ಸುದ್ದಿ ವಾಹಿನಿಗಳು ಅಪಘಾತ, ಸಾವು ಮತ್ತು ಮಹಿಳೆಯರು, ಮಕ್ಕಳು ಮತ್ತು ಹಿರಿಯರ ಮೇಲಿನ ದೌರ್ಜನ್ಯ ಸೇರಿದಂತೆ ಹಿಂಸಾಚಾರದ ಘಟನೆಗಳನ್ನು ಭೀಕರವಾಗಿ ವರದಿ ಮಾಡುತ್ತಿವೆ. ಇವುಗಳು ನೋಡಲು ಮತ್ತು ಕೇಳಲು ಸಹ್ಯವಾಗಿರುವುದಿಲ್ಲ. ಇಂತಹ ವರದಿಗಳಿಗೆ ಕಡಿವಾಣ ಅಗತ್ಯ ಎಂದಿದೆ.

ADVERTISEMENT

1995 ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯಿದೆಯ ಅಡಿಯಲ್ಲಿ ಕಾರ್ಯಕ್ರಮದ ನೀತಿಸಂಹಿತೆಗೆ ಬದ್ಧವಾಗಿರುವಂತೆ ಸಚಿವಾಲಯ ಸೂಚಿಸಿದೆ. ‘ವ್ಯಕ್ತಿಗಳ ಮೃತ ದೇಹ ಮತ್ತು ಗಾಯಗೊಂಡ ವ್ಯಕ್ತಿಗಳ ಚಿತ್ರಗಳು/ವಿಡಿಯೊಗಳನ್ನು ರಕ್ತ ಕಾಣುವಂತೆ, ಮಹಿಳೆಯರು ಸೇರಿದಂತೆ ವ್ಯಕ್ತಿಗಳ ಮುಖ ಕಾಣುವಂತೆ ಬಿತ್ತರಿಸಲಾಗುತ್ತಿದೆ. ಚಿತ್ರಗಳನ್ನು ಮಸುಕುಗೊಳಿಸುವುದು ಅಥವಾ ದೂರದಿಂದ ತೋರಿಸುವುದು ಕಡ್ಡಾಯ’ ಎಂದು ಪತ್ರದಲ್ಲಿ ತಿಳಿಸಿದೆ.

ದೂರದರ್ಶನ ಕುಟುಂಬಗಳು ಕುಳಿತು ನೋಡುವ ವೇದಿಕೆಯಾಗಿದ್ದು ಸಭ್ಯತೆ ಮರೆಯುವಂತಿಲ್ಲ. ಮಹಿಳೆಯರು, ವೃದ್ಧರು, ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಶಿಸ್ತು ಮತ್ತು ಬದ್ಧತೆ ಪ್ರದರ್ಶಿಸಬೇಕು ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.