ADVERTISEMENT

ತಮಿಳುನಾಡು: ವಲಸೆ ಹಕ್ಕಿಗಳ ರಕ್ಷಣೆಗಾಗಿ ‘ಹಸಿರು ದೀಪಾವಳಿ’ ಆಚರಿಸುವ ಗ್ರಾಮಸ್ಥರು

ಪಿಟಿಐ
Published 21 ಅಕ್ಟೋಬರ್ 2025, 0:33 IST
Last Updated 21 ಅಕ್ಟೋಬರ್ 2025, 0:33 IST
.
.   

ಚೆನ್ನೈ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದಲ್ಲಿ ಪಟಾಕಿ ಸಿಡಿತವೂ ಮೇಳೈಸಿರುತ್ತದೆ. ಇದರ ಪರಿಣಾಮ ಹಬ್ಬದ ಸಂದರ್ಭದಲ್ಲಿ ದೇಶದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ‘ಅತ್ಯಂತ ಕಳ‍‍ಪೆ’ ಎಂದಾಗಿ ದಾಖಲಾಗುತ್ತದೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ‘ಪಟಾಕಿ ಕಣಜ’ ಎಂದೇ ಬಿಂಬಿತವಾಗಿರುವ ತಮಿಳುನಾಡಿನ ಕೆಲವು ಹಳ್ಳಿಗಳು ‘ಹಸಿರು ದೀಪಾವಳಿ’ ಆಚರಿಸುತ್ತಿವೆ.

‘ವಲಸೆ ಹಕ್ಕಿಗಳ ರಕ್ಷಣೆಗಾಗಿ ಶಿವಗಂಗಾ ಜಿಲ್ಲೆಯ ವೆಟ್ಟಂಗುಡಿಪಟ್ಟಿ ಗ್ರಾಮಸ್ಥರು ಕಳೆದ ಐದು ದಶಕಗಳಿಂದಲೂ ಪಟಾಕಿ ಸಿಡಿಸದೆ, ಹಸಿರು ದೀಪಾವಳಿ ಆಚರಿಸುತ್ತಿದ್ದಾರೆ’ ಎಂದು ತಮಿಳುನಾಡು ಸರ್ಕಾರದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ತಿಳಿಸಿದ್ದಾರೆ.

ದೀಪಾವಳಿ ಮುನ್ನಾದಿನಗಳಲ್ಲಿ ‘ಹಸಿರು ಪಟಾಕಿ’ಯ ಕುರಿತಂತೆಯೇ ಬಿರುಸಿನ ಚರ್ಚೆ ನಡೆಯುವಾಗ, ಸುಪ್ರಿಯಾ ಅವರು ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ ಇದೀಗ ಸದ್ದು ಮಾಡಿದೆ.

ADVERTISEMENT

ಅರಣ್ಯ ಇಲಾಖೆಯು ವೆಟ್ಟಂಗುಡಿಪಟ್ಟಿ ಗ್ರಾಮದ ವೈಶಿಷ್ಟ್ಯ ಕುರಿತಂತೆ ತಯಾರಿಸಿರುವ ಸಾಕ್ಷ್ಯಚಿತ್ರದ ವಿಡಿಯೊ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಂಡಿದ್ದು, ಮೌನದ ಮಹತ್ವವನ್ನು ಜಗತ್ತಿಗೆ ಸಾರಿದೆ.

‘ಮೂರು ಕೆರೆಗಳಿರುವ ನಮ್ಮೂರಿಗೆ 1972ರಿಂದಲೂ ವಲಸೆ ಹಕ್ಕಿಗಳು ಬರುತ್ತಿವೆ. ಪಕ್ಷಿಗಳು ನಮ್ಮೂರಿಗೆ ಬಂದಾಗ ಉತ್ತಮ ಮಳೆಯಾಗಿದೆ. ಅಭಿವೃದ್ಧಿಗೆ ಪೂರಕವಾಗಿದೆ. ಅವು ಬಾರದಿದ್ದಾಗ ಬರಗಾಲ ಕಂಡಿದ್ದೇವೆ. ಮಳೆಯಿಲ್ಲದೆ ಸಾಕಷ್ಟು ನೊಂದಿದ್ದೇವೆ’ ಎಂದು ಗ್ರಾಮಸ್ಥ ಆರ್ಮುಗಂ ವಿಡಿಯೊದಲ್ಲಿ ಹೇಳಿದ್ದಾರೆ.

‘ದೀಪಾವಳಿ ಸಮಯದಲ್ಲಿ ಪಕ್ಷಿಗಳಿಟ್ಟಿರುವ ಮೊಟ್ಟೆಗಳು ಒಡೆದು ಮರಿಗಳಾಗುತ್ತವೆ. ಆ ಸಂದರ್ಭ ಪಟಾಕಿ ಸಿಡಿಸುವುದು ಹಕ್ಕಿಗಳ ಸಂಕುಲಕ್ಕೆ ಹಾನಿಕಾರಕ ಎಂಬುದನ್ನು ನಮ್ಮ ಹಿರಿಯರು ಕಂಡುಕೊಂಡಿದ್ದರಿಂದ, ನಮ್ಮೂರಿನಲ್ಲಿ ಹಬ್ಬದ ವೇಳೆ ಪಟಾಕಿ ಸಿಡಿಸಲ್ಲ’ ಎಂದಿದ್ದಾರೆ.

‘ಗ್ರಾಮದ ಸುತ್ತಮುತ್ತಲಿನ 36.89 ಹೆಕ್ಟೇರ್‌ ಪ್ರದೇಶವನ್ನು 1977ರಲ್ಲಿ ವೆಟ್ಟಂಗುಡಿ ಪಕ್ಷಿ ಅಭಯಧಾಮ ಎಂದು ಘೋಷಿಸಲಾಗಿದೆ. ಇಲ್ಲಿ  ಪಕ್ಷಿಗಳ ಜೀವನವು ಸಮೃದ್ಧವಾಗಿದೆ. ಕಪ್ಪು ತಲೆಯ ಐಬಿಸ್‌ (ಕಚಾಟೋರ್), ಉದ್ದಕೊಕ್ಕಿನ ಕೊಕ್ಕರೆ, ಕಾರ್ಮೊರಂಟ್‌ (ನೀರುಕಾಗೆ), ಡಾರ್ಟರ್ಸ್‌ (ಸರ್ಪಕಂಠ ಹಕ್ಕಿ), ಸ್ಪೂನ್‌ಬಿಲ್‌, ಹೆರಾನ್‌ (ಬಗುಲಾ), ಶಿಳ್ಳೆಹಾಕುವ ಬಾತುಕೋಳಿಗಳು ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ನೆಲಸಿವೆ. ಅಪರೂಪದ ಚೀನಾದ ಹೆರಾನ್‌ ಹಕ್ಕಿಗಳು ಕಂಡುಬಂದಿವೆ’ ಎಂದು ಸಾಹು ಉಲ್ಲೇಖಿಸಿದ್ದಾರೆ.

‘ಸರ್ಕಾರವು ಸಂರಕ್ಷಣಾ ಪ್ರಯತ್ನವನ್ನು ಪ್ರಾರಂಭಿಸುವ ಮೊದಲೇ ಹಳ್ಳಿಗರು ಪಕ್ಷಿಗಳ ಮಹತ್ವ ಅರಿತುಕೊಂಡಿದ್ದಾರೆ. ಹಕ್ಕಿಗಳನ್ನು ದೈವಿಕ ಭಾವನೆಯಿಂದ ನೋಡುತ್ತಿರುವುದರಿಂದ, ಈ ಊರಿನಲ್ಲಿ ಹಳ್ಳಿಗರಿಗೆ ಧನ್ಯವಾದ ಹೇಳುವುದಷ್ಟೇ ನಮ್ಮ ಕೆಲಸವಾಗಿದೆ’ ಎಂದಿದ್ದಾರೆ.

ಸುಡುಮದ್ದಿನ ಸದ್ದಿಲ್ಲದ ಗ್ರಾಮಗಳು

ವೆಟ್ಟಂಗುಡಿಪಟ್ಟಿ ಪಕ್ಕದ ಕೊಲ್ಲುಕುಡಿಪಟ್ಟಿ ಗ್ರಾಮವೂ ಪಟಾಕಿ ಸಿಡಿಸದ ನಿರ್ಧಾರವನ್ನು ಈಚೆಗೆ ತೆಗೆದುಕೊಂಡಿದೆ. ಶಿವಗಂಗಾದಿಂದ 250 ಕಿ.ಮೀ. ದೂರದಲ್ಲಿರುವ ಈರೋಡ್‌ನ ವೆಲ್ಲೋಡ್‌ ಪಕ್ಷಿ ಅಭಯಧಾಮದ ಸುತ್ತಮುತ್ತಲಿನ ಗ್ರಾಮಗಳು ಎರಡು ದಶಕದ ಹಿಂದೆಯೇ ಪಟಾಕಿ ಸಿಡಿಸದಿರುವ ನಿರ್ಧಾರ ಕೈಗೊಂಡಿವೆ. ವಡಮುಗಂ ವೆಲ್ಲೋಡ್‌ ಪಂಚಾಯಿತಿ ವ್ಯಾಪ್ತಿಯ 77.85 ಹೆಕ್ಟೇರ್‌ ಪ್ರದೇಶವನ್ನು 1996ರಲ್ಲಿ ಪಕ್ಷಿ ಅಭಯಧಾಮ ಎಂದು ಘೋಷಿಸಲಾಗಿದ್ದು, ಇಲ್ಲಿನ ಏಳೆಂಟು ಗ್ರಾಮಗಳಲ್ಲೂ ಪಟಾಕಿ ಸಿಡಿಸುತ್ತಿಲ್ಲ. ‘ಪಟಾಕಿ ಸಿಡಿಸುವುದರಿಂದ ಪಕ್ಷಿಗಳು ನಮ್ಮಲ್ಲಿಗೆ ಬರುವುದಿಲ್ಲ. ಅವು ಬಾರದಿದ್ದರೆ ಪಕ್ಷಿ ವೀಕ್ಷಕರು, ಪ್ರವಾಸಿಗರು ಇತ್ತ ಸುಳಿಯಲ್ಲ. ಆಗ ನಮ್ಮ ವರಮಾನಕ್ಕೆ ಕುತ್ತು ಬರಲಿದೆ ಎಂಬುದನ್ನು ಅರಿತು ಪಟಾಕಿ ಸುಡುವುದನ್ನೇ ಬಿಟ್ಟಿದ್ದೇವೆ. ಮತಾಪು, ಹೂವಿನಕುಂಡಗಳನ್ನಷ್ಟೇ ಸುಡುತ್ತೇವೆ’ ಎಂದು ವೆಲ್ಲೋಡ್‌ನ ಪೊನ್ನುಸ್ವಾಮಿ, ಮೊಸುವಣ್ಣನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.