ADVERTISEMENT

ಫೇಕ್ ನ್ಯೂಸ್‌ ಪ್ರಕರಣ: ವಿಭಾಗೀಯ ಪೀಠದ ಭಿನ್ನ ತೀರ್ಪು; 3ನೇ ನ್ಯಾಯಮೂರ್ತಿಗೆ ಹೊಣೆ

ಪಿಟಿಐ
Published 8 ಫೆಬ್ರುವರಿ 2024, 13:50 IST
Last Updated 8 ಫೆಬ್ರುವರಿ 2024, 13:50 IST
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್   

ಮುಂಬೈ: ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿ ತಡೆಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಇತ್ತೀಚೆಗೆ ತಂದ ತಿದ್ದುಪಡಿ ಅನ್ವಯ ರಚನೆಗೊಂಡ ಫ್ಯಾಕ್ಟ್ ಚೆಕ್ಕಿಂಗ್ ಘಟಕಕ್ಕೆ ತಡೆ ನೀಡುವ ನಿರ್ಧಾರವನ್ನು ಮೂರನೇ ನ್ಯಾಯಮೂರ್ತಿ ನಿರ್ಧರಿಸಲಿದ್ದಾರೆ’ ಎಂದು ಬಾಂಬೆ ಹೈಕೋರ್ಟ್ ಗುರುವಾರ ಹೇಳಿದೆ.

ಜ. 31ರಂದು ಈ ಪ್ರಕರಣ ವಿಚಾರಣೆ ನಡೆಸಿದ ವಿಭಾಗೀಯ ಪೀಠದ ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಹಾಗೂ ನೀಲಾ ಗೋಖಲೆ ಅವರು ಭಿನ್ನ ತೀರ್ಪು ನೀಡಿದ್ದರು. 

ನ್ಯಾ. ಪಟೇಲ್ ಅವರು ತಮ್ಮ 148 ಪುಟಗಳ ತೀರ್ಪಿನಲ್ಲಿ, ‘ಈ ಕಾನೂನು ಸೆನ್ಸರ್‌ಗೆ ಸಮನಾಗಿದೆ’ ಎಂದಿದ್ದರೆ, ನ್ಯಾ. ಗೋಖಲೆ ಅವರು ತಮ್ಮ 92 ಪುಟಗಳ ತೀರ್ಪಿನಲ್ಲಿ, ‘ವಾಕ್‌ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದು’ ಎಂದಿದ್ದರು. ಭಿನ್ನ ತೀರ್ಪು ಪ್ರಕಟವಾದ ಬೆನ್ನಲ್ಲೇ ಮೂರನೇ ನ್ಯಾಯಮೂರ್ತಿ ಅಭಿಪ್ರಾಯ ನೀಡುವಂತೆ ಪೀಠ ಹೇಳಿತು.

ADVERTISEMENT

ಮೂರನೇ ನ್ಯಾಯಮೂರ್ತಿ ಪ್ರಕರಣ ಕುರಿತು ತಮ್ಮ ತೀರ್ಪು ನೀಡುವವರೆಗೂ ಹಿಂದೆ ಇದ್ದ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಸ್ಟ್ಯಾಂಡ್‌ಅಪ್ ಹಾಸ್ಯಗಾರ ಕುನಾಲ್ ಕಾಮ್ರಾ, ಭಾರತೀಯ ಸಂಪಾದಕರ ಒಕ್ಕೂಟ ಹಾಗೂ ಭಾರತೀಯ ನಿಯತಕಾಲಿಕೆಗಳ ಸಂಘಟನೆಗಳು ಮಧ್ಯಂತರ ಅರ್ಜಿ ಸಲ್ಲಿಸಿದ್ದವು

‘ಈ ಪ್ರಕರಣದ ಪ್ರಮುಖ ವಿಷಯದಲ್ಲಿ ನಿಯಮಗಳ ಸಾಂವಿಧಾನಿಕ ಸಿಂಧುತ್ವ ಕುರಿತು ವಿಭಾಗೀಯ ಪೀಠ ಭಿನ್ನ ನಿಲುವು ಹೊಂದಿದೆ. ಹೀಗಾಗಿ ಮಧ್ಯಂತರ ತಡೆ ಮುಂದುವರಿಸಬೇಕೇ ಎಂಬುದರ ಕುರಿತೂ ಈ ನಿಲುವು ಮುಂದುವರಿಯುತ್ತದೆ. ಹೀಗಾಗಿ ಈ ಎರಡೂ ವಿಷಯಗಳ ಕುರಿತು 3ನೇ ನ್ಯಾಯಮೂರ್ತಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿರುವ ಅರ್ಜಿದಾರರು, ಈ ನಿಯಮಗಳು ಅನಿಯಂತ್ರಿತ ಮತ್ತು ಅಸಾಂವಿಧಾನಿಕ ಎಂದಿದ್ದರು.

ಮಾಹಿತಿ ತಂತ್ರಜ್ಞಾನ ಕಾಯ್ದೆಗೆ 2023ರ ಏ. 6ರಂದು ಕೇಂದ್ರ ಸರ್ಕಾರವು ಕೆಲ ತಿದ್ದುಪಡಿ ತಂದು, ಸರ್ಕಾರದ ವಿರುದ್ಧ ಸುಳ್ಳು, ತಪ್ಪು ಅಥವಾ ಅಪಾರ್ಥ ಸೃಷ್ಟಿಸುವ ವರದಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸತ್ಯ ಪರಿಶೀಲನಾ ಘಟಕ ತೆರೆಯಲು ಅವಕಾಶ ಕಲ್ಪಿಸಿತ್ತು. 

ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗುವ ಯಾವುದೇ ಮಾಹಿತಿಯು ಸುಳ್ಳು, ತಪ್ಪು ಅಥವಾ ಅಪಾರ್ಥ ಸೃಷ್ಟಿಸುತ್ತದೆ ಎಂದು ಘಟಕವು ಹೇಳಿದರೆ, ಅಂಥ ಪೋಸ್ಟ್ ಅನ್ನು ತಡೆಹಿಡಿಯುವ ಅಥವಾ ಅದಕ್ಕೆ ಹಕ್ಕು ನಿರಾಕರಣೆ ಒಕ್ಕಣೆ ಹಾಕುವ ಅವಕಾಶ ಇದೆ. 2ನೇ ಆಯ್ಕೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವ ಅವಕಾಶವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.