
ತಿರುವನಂತಪುರ: ಕೇರಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ತಿರುವನಂತಪುರ ಪಾಲಿಕೆಯನ್ನು ಗೆದ್ದುಕೊಂಡಿತ್ತು. ‘ಇದೊಂದು ಅಭೂತಪೂರ್ವ ಗೆಲುವು’ ಎಂದು ಬಣ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೇಯರ್ ವಿ.ವಿ. ರಾಜೇಶ್ ಅವರಿಗೆ ಡಿ.30ರಂದು ಪತ್ರ ಬರೆದಿದ್ದಾರೆ.
ರಾಜೇಶ್ ಮತ್ತು ಪಕ್ಷದ ಕಾರ್ಯಕರ್ತರ, ಮುಖಂಡರ ಶ್ರಮವನ್ನು ಕೊಂಡಾಡಿರುವ ಪ್ರಧಾನಿ ಮೋದಿ, ‘ಯುವಕರು ಮತ್ತು ಮಹಿಳೆಯರು ಹೊಸ ಬೆಳಗನ್ನು ನೋಡಲು ಸಿದ್ಧರಾಗಿದ್ದಾರೆ ಎನ್ನುವುದಕ್ಕೆ ಈ ಗೆಲುವೇ ಸಾಕ್ಷಿ’ ಎಂದು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
‘ದೆಹಲಿಯಲ್ಲಿ ಸ್ನೇಹಿತರು;ಕೇರಳದಲ್ಲಿ ವಿರೋಧಿಗಳು ಎಂಬ ಎಲ್‌ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟಗಳ ‘ಮ್ಯಾಚ್‌ಫಿಕ್ಸಿಂಗ್’ ಅಂತ್ಯವಾಗಲಿದೆ. ಈ ಪಕ್ಷಗಳ ಟೊಳ್ಳು ಭರವಸೆಗಳಿಂದ ಹೊರಬರಲು ಕೇರಳ ಬಯಸುತ್ತಿದೆ. ಇವರು ಭ್ರಷ್ಟಾಚಾರ, ಅತೀವ ಹಿಂಸೆಯ ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಇದು ಕೇರಳದ ನೈತಿಕತೆಗೆ ವಿರುದ್ಧವಾದುದು. ಈ ಎಲ್ಲದರ ಮಧ್ಯೆಯೂ ನಮ್ಮ ಕಾರ್ಯಕರ್ತರು ದೃಢವಾಗಿ ನಿಂತುಕೊಂಡರು’ ಎಂದಿದ್ದಾರೆ.
‘ತಿರುವನಂತಪುರವು ಶ್ರೀ ಪದ್ಮನಾಭಸ್ವಾಮಿಯ ಸಾನಿಧ್ಯವನ್ನು ಹೊಂದಿದೆ. ಈ ನಗರವು ಹಲವು ರಾಜಕೀಯ ನಾಯಕರನ್ನು, ಸಾಮಾಜ ಸುಧಾರಕರನ್ನು, ಕಲಾವಿದರನ್ನು, ಸಂಗೀತಗಾರರನ್ನು, ಕವಿಗಳನ್ನು, ಸಂತರನ್ನು ಪೋಷಿಸಿಕೊಂಡು ಬಂದಿದೆ. ಇಂಥ ನಗರವೊಂದು ನಮ್ಮ ಪಕ್ಷವನ್ನು ಆಶೀರ್ವದಿಸಿದೆ. ಇದು ನಮ್ಮನ್ನು ವಿನೀತರನ್ನಾಗಿಸಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.