ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಗೋರಖ್‌ಪುರ (ಉತ್ತರ ಪ್ರದೇಶ): ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳವನ್ನು ‘ಮೃತ್ಯು ಕುಂಭ’ ಎಂದು ಹೇಳಿದ್ದವರಿಗೆ ತಮ್ಮ ರಾಜ್ಯದಲ್ಲಿ ಹೋಳಿ ಸಮಯದಲ್ಲಿ ನಡೆದ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಗೋರಖ್‌ಪುರದಲ್ಲಿ ನಡೆದ ಪತ್ರಕರ್ತರ ಪತ್ರಿಕಾ ಭವನಕ್ಕೆ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳ ಪ್ರಮಾಣವಚನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಮೊದಲ ಬಾರಿಗೆ ತಮಿಳುನಾಡಿನಿಂದ ಜನರು ಮಹಾ ಕುಂಭಕ್ಕೆ ಬಂದಿದ್ದರು. ಕೇರಳದಿಂದಲೂ ಜನರು ಬಂದಿದ್ದಾರೆ. ಉತ್ತರ ಪ್ರದೇಶದ ಜನಸಂಖ್ಯೆ 25 ಕೋಟಿ. ಆದರೂ, ಹೋಳಿ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಆದರೆ, ಪಶ್ಚಿಮ ಬಂಗಾಳದಲ್ಲಿ, ಹೋಳಿ ಸಮಯದಲ್ಲಿ ಹಲವಾರು ಅಡಚಣೆಗಳು ಸಂಭವಿಸಿದವು’ ಎಂದು ಅವರು ಆರೋಪಿಸಿದ್ದಾರೆ.
‘ಹೋಳಿ ಸಂಭ್ರಮಾಚರಣೆಯಲ್ಲಿ ಉಂಟಾಗುವ ಅಡಚಣೆಯನ್ನು ನಿಯಂತ್ರಿಸಲು ಸಾಧ್ಯವಾಗದ ಜನರು, ಪ್ರಯಾಗರಾಜ್ ಮಹಾ ಕುಂಭವನ್ನು ‘ಮೃತ್ಯು ಕುಂಭ’ ಎಂದು ಹೇಳಿದ್ದರು. ಆದರೆ, ನಾವು ಅದನ್ನು ಮೃತ್ಯು ಅಲ್ಲ, ‘ಮೃತ್ಯುಂಜಯ’ ಎಂದು ಹೇಳಿದ್ದೇವೆ. 45 ದಿನಗಳ ಕಾಲ ನಡೆದ ಮಹಾ ಕುಂಭಮೇಳದಲ್ಲಿ ಪ್ರತಿದಿನ ಪಶ್ಚಿಮ ಬಂಗಾಳದ 50,000 ರಿಂದ 1 ಲಕ್ಷ ಜನರು ಭಾಗವಹಿಸಿದ್ದರು’ ಎಂದು ಆದಿತ್ಯನಾಥ್ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ‘ಮಹಾ ಕುಂಭ’ದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಅದು ‘ಮೃತ್ಯು ಕುಂಭ’ವಾಗಿ ಪರಿವರ್ತನೆ ಆಗಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.