ADVERTISEMENT

ರೈತರ ಪ್ರತಿಭಟನೆಗೆ ಮಹಾಪಂಚಾಯಿತಿ ಬಲ: ಮುಜಫ್ಫರ್‌ನಗರದಲ್ಲಿ ರೈತರ ಭಾರಿ ಸಮಾವೇಶ

ಮುಜಫ್ಫರ್‌ನಗರದಲ್ಲಿ ರೈತರ ಭಾರಿ ಸಮಾವೇಶ l ಸರ್ಕಾರದ ವಿರುದ್ಧ ಆಕ್ರೋಶ l ಚಳವಳಿ ಮುಂದುವರಿಸಲು ತೀರ್ಮಾನ

ಪಿಟಿಐ
Published 29 ಜನವರಿ 2021, 17:15 IST
Last Updated 29 ಜನವರಿ 2021, 17:15 IST
ಮುಜಫ್ಫರ್‌ನಗರದಲ್ಲಿ ಶುಕ್ರವಾರ ನಡೆದ ಕಿಸಾನ್‌ ಪಂಚಾಯಿತಿಯಲ್ಲಿ ಸಾವಿರಾರು ಜನರು ಸೇರಿದ್ದರು ಪಿಟಿಐ ಚಿತ್ರ
ಮುಜಫ್ಫರ್‌ನಗರದಲ್ಲಿ ಶುಕ್ರವಾರ ನಡೆದ ಕಿಸಾನ್‌ ಪಂಚಾಯಿತಿಯಲ್ಲಿ ಸಾವಿರಾರು ಜನರು ಸೇರಿದ್ದರು ಪಿಟಿಐ ಚಿತ್ರ   

ಮುಜಫ್ಫರ್‌ನಗರ: ಭಾರತೀಯ ಕಿಸಾನ್‌ ಯೂನಿಯನ್ (ಬಿಕೆಯು)‌ ನೇತೃತ್ವದಲ್ಲಿ ದೆಹಲಿಯ ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಉತ್ತರ ಪ್ರದೇಶದ ಮುಜಫ್ಫರ್‌ನಗರದಲ್ಲಿ ಶುಕ್ರ ವಾರ ಕರೆಯಲಾಗಿದ್ದ ಮಹಾ ಪಂಚಾಯಿತಿಯಲ್ಲಿ ಸಾವಿರಾರು ರೈತರು ಭಾಗವಹಿಸಿದ್ದಾರೆ.

ಬಿಕೆಯು ವಕ್ತಾರ ರಾಕೇಶ್‌ ಟಿಕಾಯತ್‌ ಅವರು ಗುರುವಾರ ಗಾಜಿಪುರ ಪ್ರತಿಭಟನಾ ಸ್ಥಳದಲ್ಲಿ ಕಣ್ಣೀರು ಹಾಕಿದ್ದರು. ಎರಡು ತಿಂಗಳಿಂದ ಗಾಜಿಪುರದಲ್ಲಿ ಪ್ರತಿ ಭಟನೆ ನಡೆಸುತ್ತಿರುವ ರೈತರನ್ನು ಪೊಲೀಸರು ಬಲವಂತವಾಗಿ ತೆರವು ಮಾಡಲು ಮುಂದಾಗಿದ್ದು ಆತಂಕಕ್ಕೆ ಕಾರಣವಾಗಿತ್ತು. ಹಾಗಾಗಿ, ಮುಜಫ್ಫರ್‌ ನಗರದಲ್ಲಿ ನಡೆದ ಮಹಾಪಂಚಾಯಿತಿಗೆ ಉತ್ತರ ಪ್ರದೇಶದ ಪೂರ್ವ ಭಾಗದಿಂದ ಸಾವಿರಾರು ಜನರು ಬಂದರು.

ಮಹಾವೀರ ಚೌಕ ಸಮೀಪದ ಜಿಐಸಿ ಮೈದಾನವು ರೈತರಿಂದ ತುಂಬಿ ಹೋಗಿತ್ತು. ತ್ರಿವರ್ಣ ಧ್ವಜಗಳನ್ನು ಹೊಂದಿದ್ದ ನೂರಾರು ಟ್ರ್ಯಾಕ್ಟರ್‌ಗಳನ್ನು ರಸ್ತೆ ಬದಿಗಳಲ್ಲಿಯೇ ನಿಲ್ಲಿಸಲಾಗಿತ್ತು. ಹಾಗಾಗಿ, ನಗರದಲ್ಲಿ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು.

ADVERTISEMENT

ಬಲವಂತವಾಗಿ ತೆರವು ಮಾಡಲಾಗುವುದು ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿದ್ದರೂ ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ಮುಂದುವರಿಸಲು ರೈತರು ಶುಕ್ರವಾರ ನಿರ್ಧರಿಸಿದ್ದಾರೆ. ರೈತರ ಮಹಾ ಪಂಚಾಯಿತಿಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.

ಬಿಕೆಯು ಅಧ್ಯಕ್ಷ ನರೇಶ್‌ ಟಿಕಾಯತ್‌ ಅವರು ಮಹಾಪಂಚಾಯಿತಿಯಲ್ಲಿ ಮಾತನಾಡಿ, ಗಾಜಿಪುರದಲ್ಲಿ ಪ್ರತಿಭಟನೆಯನ್ನು ಕೊನೆಗೊಳಿಸುವ ಪ್ರಶ್ನೆಯೇ ಇಲ್ಲ ಅಂದರು. ರೈತರು ಭಾರಿ ಸಂಖ್ಯೆಯಲ್ಲಿ ಪ್ರತಿಭಟನೆಗೆ ಸೇರಿಕೊಳ್ಳುವಂತೆ ಅವರು ಕರೆ ಕೊಟ್ಟರು.‘ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ರೈತರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ. ರೈತರು ಎಂದಿಗೂ ತ್ರಿವರ್ಣ ಧ್ವಜಕ್ಕೆ ಅಗೌರವ ತೋರುವುದಿಲ್ಲ’ ಎಂದರು.

ಸಮಾಜವಾದಿ ಪಕ್ಷ, ರಾಷ್ಟ್ರೀಯ ಲೋಕದಳ ಮತ್ತು ಆಮ್‌ ಆದ್ಮಿ ಪಕ್ಷದ ನಾಯಕರು ಕೂಡ ಮಹಾಪಂಚಾಯಿತಿಯಲ್ಲಿ ಭಾಗಿಯಾಗಿದ್ದಾರೆ. ‘ಕೇಂದ್ರ ಮತ್ತು ಉತ್ತರ ಪ್ರದೇಶದ ಬಿಜೆಪಿ ನೇತೃತ್ವದ ಸರ್ಕಾರಗಳು ರೈತರಿಗೆ ಕಿರುಕುಳ ನೀಡು ತ್ತಿವೆ. ಆದರೆ, ಇಡೀ ದೇಶ ರೈತರ ಪರವಾಗಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಗಾಜಿಪುರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳಕ್ಕೆ ಕೊಡಲಾಗಿದ್ದ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಗಾಜಿಯಾಬಾದ್‌ ಜಿಲ್ಲಾಡಳಿತವು ಗುರು ವಾರ ಕಡಿತಗೊಳಿಸಿದೆ. ರೈತರು ಅಲ್ಲಿಂದ ಹೋಗದಿದ್ದರೆ ಬಲವಂತವಾಗಿ ತೆರವು ಮಾಡುವ ಎಚ್ಚರಿಕೆಯನ್ನೂ ಕೊಟ್ಟಿದೆ.

ಮತ್ತಷ್ಟು ರೈತರು:ಹರಿಯಾಣದ ನೂರಾರು ರೈತರು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸೇರಿ ಕೊಳ್ಳಲು ಶುಕ್ರವಾರ ನಿರ್ಧರಿಸಿದ್ದಾರೆ. ರೈತ ನಾಯಕರ ವಿರುದ್ಧ ಸರ್ಕಾರವು ಕೈಗೊಂಡ ಕ್ರಮಗಳಿಂದಾಗಿ ಹೋರಾ ಟವು ದುರ್ಬಲವಾಗುವುದಿಲ್ಲ ಎಂದು ಈ ರೈತರು ಹೇಳಿದ್ದಾರೆ.

ಜಿಂದ್‌, ರೋಹ್ಟಕ್‌, ಕೈಥಾಲ್‌, ಹಿಸಾರ್‌, ಭಿವಾನಿ ಮತ್ತು ಸೋನಿಪತ್‌ ನಿಂದ ರೈತರು ದೆಹಲಿಯ ಸಿಂಘು, ಟಿಕ್ರಿ, ಗಾಜಿಪುರ ಗಡಿಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

‘ಸತ್ಯ ಬಯಲಿಗೆ ಬರಲು ಸಮಯ ಬೇಕು’

ಕೆಂಪು ಕೋಟೆಯಲ್ಲಿ ಸಿಖ್‌ ಧಾರ್ಮಿಕ ಧ್ವಜ ಹಾರಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದೀಪ್ ಸಿಧು ಅವರು ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ.

‘ನನ್ನ ವಿರುದ್ಧ ಬಂಧನ ವಾರಂಟ್‌ ಮತ್ತು ಲುಕ್‌ಔಟ್‌ ನೋಟಿಸ್ ಹೊರಡಿಸಲಾಗಿದೆ. ಹಾಗಾಗಿ ತನಿಖೆಗೆ ಸಹಕರಿಸುವ ಸಂದೇಶವನ್ನು ನಾನು ನೀಡಬೇಕಾಗಿದೆ’ ಎಂದು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

‘ಈಗ ಎಲ್ಲೆಡೆ ಹರಡಿರುವ ಸುದ್ದಿಯು ಸತ್ಯವಲ್ಲ. ಈ ಮಾಹಿತಿಯು ಜನರನ್ನು ತಪ್ಪು ದಾರಿಗೆ ಎಳೆಯುತ್ತದೆ. ಹಾಗಾಗಿ, ಸತ್ಯವನ್ನು ಹೊರತರಲು ಒಂದೆರಡು ದಿನ ಸಮಯ ಬೇಕು. ಬಳಿಕ ತನಿಖೆಯ ಜತೆಯಾಗುತ್ತೇನೆ’ ಎಂದು ಹೇಳಿದ್ದಾರೆ.

ಸಿಂಘು ಗಡಿ ಭದ್ರಕೋಟೆ

ರೈತರ ಪ್ರತಿಭಟನೆಯ ಪ್ರಮುಖ ಕೇಂದ್ರವಾದ ಸಿಂಘು ಗಡಿಯಲ್ಲಿ ಭಾರಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಪ್ರವೇಶದ ಎಲ್ಲ ಮಾರ್ಗಗಳನ್ನೂ ಬಂದ್‌ ಮಾಡಲಾಗಿದೆ. ಎಲ್ಲೆಡೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಈ ಪ್ರದೇಶವು ಅಕ್ಷರಶಃ ಕೋಟೆಯಾಗಿ ಶುಕ್ರವಾರ ಪರಿವರ್ತನೆ ಆಗಿದೆ. ಮಾಧ್ಯಮ ಪ್ರತಿನಿಧಿಗಳೂ ಸೇರಿ ಯಾರನ್ನೂ ಅಲ್ಲಿ ಪ್ರವೇಶಿಸಲು ಅವಕಾಶ ನೀಡಲಾಗುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.