ಛತ್ರಪತಿ ಸಾಂಭಾಜಿನಗರ: ದಕ್ಷಿಣ ಕೊರಿಯಾದ ಪ್ರಸಿದ್ಧ ಪಾಪ್ ಬ್ಯಾಂಡ್ ಬಿಟಿಎಸ್‌ನ ಸದಸ್ಯರನ್ನು ಭೇಟಿಯಾಗಲು ಬೇಕಾದ ಹಣ ಹೊಂದಿಸಲು ಮೂವರು ಅಪ್ರಾಪ್ತ ಬಾಲಕಿಯರು ತಮ್ಮದೇ ಅಪಹರಣದ ನಾಟಕವಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಈ ಮೂವರೂ ವಿದ್ಯಾರ್ಥಿಗಳು ಧಾರಾಶಿವ ಜಿಲ್ಲೆಯವರಾಗಿದ್ದು ಒಬ್ಬಳು 11 ಹಾಗೂ ಇನ್ನಿಬ್ಬರು 13 ವರ್ಷದವರು. ತಮ್ಮ ನೆಚ್ಚಿನ ಕೆ–ಪಾಪ್ ಬ್ಯಾಂಡ್ ಸದಸ್ಯರನ್ನು ಭೇಟಿ ಮಾಡಲು ದಕ್ಷಿಣ ಕೊರಿಯಾಗೆ ತೆರಳುವ ಯೋಜನೆ ಹಾಕಿಕೊಂಡಿದ್ದ ಇವರು, ಹಣ ಗಳಿಸಲು ಪುಣೆಗೆ ತೆರಳಲು ಸಿದ್ಧತೆ ನಡೆಸಿದ್ದರು ಎಂದು ಒಮೆರ್ಗಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಮೆರ್ಗಾ ತಾಲೂಕಿನಲ್ಲಿ ಮೂವರು ಬಾಲಕಿಯರನ್ನು ಶಾಲಾ ವಾಹನದಿಂದ ಅಪಹರಿಸಲಾಗಿದೆ ಎಂದು ಪೊಲೀಸ್ ನಿಯಂತ್ರಣ ಕೊಠಡಿಗೆ ಡಿ.27ರಂದು ಕರೆ ಬಂದಿತ್ತು. ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಒಮೆರ್ಗಾದಿಂದ ಪುಣೆಗೆ ತೆರಳುತ್ತಿದ್ದ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಸೇರಿದ ನಂಬರ್ ಎಂದು ಗೊತ್ತಾಗಿದೆ.
ಸೋಲಾಪುರ ಜಿಲ್ಲೆಯ ಮೊಹೊಲ್ ಪ್ರದೇಶದಲ್ಲಿ ಬಸ್ ತೆರಳುತ್ತಿರುವಾಗ ಬಸ್ ಅನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದಾರೆ. ಒಮೆರ್ಗಾ ಪೊಲೀಸರು ಅಲ್ಲಿನ ಪೊಲೀಸರು ಹಾಗೂ ಮೊಹೊಲ್ ಬಸ್ ನಿಲ್ದಾಣದಲ್ಲಿ ಅಂಗಡಿ ನಡೆಸುತ್ತಿರುವ ಮಹಿಳೆಯೊಬ್ಬರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಮಹಿಳೆಯ ನೆರವಿನಿಂದ ಮಕ್ಕಳನ್ನು ಬಸ್ಸಿನಿಂದ ಕೆಳಗೆ ಇಳಿಸಿ, ಸ್ಥಳೀಯ ಪೊಲೀಸ್ ಠಾಣೆಗೆ ಕರೆತರಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಲಕಿಯರ ಪೋಷಕರ ಜೊತೆಗೆ ಒಮೆರ್ಗಾ ಪೊಲೀಸರು ಅಲ್ಲಿಗೆ ತೆರಳಿದ್ದಾರೆ.
‘ದಕ್ಷಿಣ ಕೊರಿಯಾಗೆ ಹೋಗಿ ತಮ್ಮ ನೆಚ್ಚಿನ ಬಿಟಿಎಸ್ ಪಾಪ್ ಬ್ಯಾಂಡ್‌ನ ಸದಸ್ಯರ ಭೇಟಿಗೆ ಬೇಕಾದ ಹಣ ಹೊಂದಿಸಲು ಪುಣೆಗೆ ಹೋಗಿ, ಅಲ್ಲಿ ಏನಾದರೂ ಕೆಲಸ ಮಾಡಲು ಯೋಜನೆ ಹಾಕಿಕೊಂಡಿದ್ದೆವು’ ಎಂದು ವಿಚಾರಣೆ ವೇಳೆ ಬಾಲಕಿಯರು ಹೇಳಿದ್ದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.