ADVERTISEMENT

ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳಲು ಪ್ರಯತ್ನಿಸುತ್ತಿದ್ದ ಮೂವರು ಉಗ್ರರ ಹತ್ಯೆ

ಪಾಕ್‌ ಶೆಲ್ ದಾಳಿ; ಗಾಯಗೊಂಡ ನಾಲ್ವರು ಭಾರತೀಯ ಸೈನಿಕರು

ಪಿಟಿಐ
Published 20 ಜನವರಿ 2021, 6:45 IST
Last Updated 20 ಜನವರಿ 2021, 6:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜಮ್ಮು: ಜಿಲ್ಲೆಯ ಅಖ್ನೂರ್‌ನ ಖೌರ್ ಸೆಕ್ಟರ್‌ ಬಳಿಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಮೂಲಕ ಮಂಗಳವಾರ ರಾತ್ರಿ ಭಾರತದ ಭೂಪ್ರದೇಶದತ್ತ ನುಸುಳಲು ಪ್ರಯತ್ನಿಸುತ್ತಿದ್ದ ಶಸ್ತ್ರಸಜ್ಜಿತ ಮೂವರು ಉಗ್ರರನ್ನು ಭಾರತೀಯ ಸೈನಿಕರು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ಸೋಮವಾರ ಮತ್ತು ಮಂಗಳವಾರ ರಾತ್ರಿ ಖೌರ್ ಸೆಕ್ಟರ್‌ನಲ್ಲಿನ ನಿಯಂತ್ರಣ ರೇಖೆಯ ಮೂಲಕ ಭಾರತದ ಕಡೆಗೆ ನುಸುಳಲು ಯತ್ನಿಸುತ್ತಿದ್ದ ಐವರು ಶಸ್ತ್ರಸಜ್ಜಿತ ಉಗ್ರರನ್ನು ಭಾರತೀಯ ಯೋಧರು ಗುಂಡಿನ ದಾಳಿಯ ಮೂಲಕ ತಡೆಯಲು ಪ್ರಯತ್ನಿಸಿದ್ದಾರೆ.

ಈ ಮಧ್ಯೆ, ಪಾಕಿಸ್ತಾನ ಸೇನಾಪಡೆಯವರು ಉಗ್ರರನ್ನು ಭಾರತದ ಭೂ ಪ್ರದೇಶದತ್ತ ಓಡಿಸುವುದಕ್ಕಾಗಿ ಖೌರ್ ಸೆಕ್ಟರ್‌ನ ಜೋಗ್ಮಾ ಎಂಬ ಹಳ್ಳಿಯ ಮೇಲೆ ಭಾರಿ ಶೆಲ್ ದಾಳಿ ನಡೆಸಿದರು. ಈ ದಾಳಿಯಲ್ಲಿ ನಾಲ್ವರು ಭಾರತೀಯ ಸೈನಿಕರು ಗಾಯಗೊಂಡರು. ಇದಕ್ಕೆ ಪ್ರತಿಕಾರವಾಗಿ ಭಾರತೀಯ ಸೈನಿಕರು, ಗಡಿ ನಿಯಂತ್ರಣ ರೇಖೆಯಿಂದ ಒಳ ನುಸುಳುತ್ತಿದ್ದ ಮೂವರು ಶಸ್ತ್ರಸಜ್ಜಿತ ಉಗ್ರರನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು.

ADVERTISEMENT

ಘಟನೆಯಲ್ಲಿ ಮೃತಪಟ್ಟ ಮೂವರು ಉಗ್ರರ ಶವಗಳು ಗಡಿ ನಿಯಂತ್ರಣ ರೇಖೆಯ ಬಳಿ ಬಿದ್ದಿವೆ. ಪಾಕಿಸ್ತಾನ ಸೇನಾ ಪಡೆಯವರು ಈವರೆಗೂ ಅವುಗಳನ್ನು ತೆಗೆದುಕೊಂಡು ಹೋಗಿಲ್ಲ. ವರದಿಯ ಪ್ರಕಾರ ಗಾಯಗೊಂಡ ನಾಲ್ವರು ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಉಗ್ರರ ಒಳನಸುಳಿವಿಕೆಗೆ ಸಂಬಂಧಿಸಿದಂತೆ ಸೇನಾ ವಿಭಾಗದವರು ಇಲ್ಲಿವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಮೂಲಗಳ ಪ್ರಕಾರ ಗಡಿ ನಿಯಂತ್ರಣ ರೇಖೆಯ ಬಳಿ ಇನ್ನೂ ಉಗ್ರರು ಅಡಗಿಕೊಂಡಿರುವ ಸಾಧ್ಯತೆ ಇದ್ದು, ಭಾರತೀಯ ಯೋಧರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

‘ಈ ಉಗ್ರಗಾಮಿಗಳು, ಜೈಷ್‌ ಎ– ಮೊಹಮ್ಮದ್ (ಜೆಇಎಂ) ಸಂಘಟನೆಯಿಂದ ತರಬೇತಿ ಪಡೆದವರಾಗಿದ್ದು, ಅವರು ಸುಂದರ್‌ಬನಿ ಸುತ್ತಮುತ್ತಲಿನ ಪ್ರದೇಶದ ಮೂಲಕ ಪಿರ್‌ ಪಂಜಾಲ್‌ ಪರ್ವತಗಳನ್ನು ದಾಟಿ ದಕ್ಷಿಣ ಕಾಶ್ಮೀರವನ್ನು ತಲುಪುವ ಉದ್ದೇಶದಿಂದ ಒಳನುಸುಳಲು ಪ್ರಯತ್ನಿಸುತ್ತಿರಬಹುದು. ಜತೆಗೆ ಗಣರಾಜ್ಯೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮವನ್ನೂ ಭಂಗಗಳಿಸುವ ಉದ್ದೇಶ ಹೊಂದಿರಬಹುದು‘ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.