
ಜಾತ್ರೆಲಿ ಭರ್ಜರಿ ನೃತ್ಯ ಮಾಡಿದ ಐಪಿಎಸ್ ವಸುಂಧರಾ! ತೆಲಂಗಾಣದ ಮೊನಾಲಿಸಾ ಎಂದ ಜನ
ಬೆಂಗಳೂರು: ತೆಲಂಗಾಣದ ಪ್ರಸಿದ್ಧ ಜಾತ್ರಾ ಮಹೋತ್ಸವ ಆಗಿರುವ ಮುಲುಗು ಜಿಲ್ಲೆಯ ತಾಂಡಾವಿ ತಾಲ್ಲೂಕಿನ ಮೇದರಂ ‘ಸಮ್ಮಕ್ಕ–ಸರಳಮ್ಮ’ ಜಾತ್ರಾ ಮಹೋತ್ಸವ ಭರ್ಜರಿಯಾಗಿ ನಡೆಯುತ್ತಿದ್ದು, ಸುತ್ತಲಿನ ಜಿಲ್ಲೆಗಳ ಜನರಿಗೆ ಪ್ರಸಿದ್ಧ ಜಾತ್ರಾ ಸ್ಥಳವಾಗಿದೆ.
ಸಮ್ಮಕ್ಕ–ಸರಳಮ್ಮ ಜಾತ್ರಾ ಮಹೋತ್ಸವದಲ್ಲಿ ಒಬ್ಬ ಯುವ ಐಪಿಎಸ್ ಅಧಿಕಾರಿ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಅವರೇ ತೆಲಂಗಾಣದ ಯುವ ಐಪಿಎಸ್ ವಸುಂಧರಾ ಯಾದವ್.
ಸದ್ಯ ವಸುಂಧರಾ ಯಾದವ್ ಅವರು ತೆಲಂಗಾಣದ ಕಮ್ಮಂ ಜಿಲ್ಲೆಯ ಕಲ್ಲೂರಿನ ಎಸಿಪಿಯಾಗಿದ್ದಾರೆ. ಇವರಿಗೆ ಸಮ್ಮಕ್ಕ–ಸರಳಮ್ಮ ಜಾತ್ರಾ ಮಹೋತ್ಸವದ ಭದ್ರತಾ ಉಸ್ತುವಾರಿಯನ್ನು ವಹಿಸಲಾಗಿದೆ.
ಜಾತ್ರೆಗೆ ಅಪಾರ ಪ್ರಮಾಣದಲ್ಲಿ ಜನ ಹರಿದು ಬರುತ್ತಿದ್ದು ಭದ್ರತೆಗೆ ಯಾವುದೇ ತೊಂದರೆ ಆಗದಂತೆ ವಸುಂಧರಾ ಸ್ಥಳದಲ್ಲಿಯೇ ಇದ್ದು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಈ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಮಾದರಿಯಾಗಿದ್ದಾರೆ.
ಇದೇ ವೇಳೆ ವಸುಂಧರಾ ಅವರು ಮುಜರಾಯಿ ಇಲಾಖೆಯ ಸಚಿವೆ ಸೀತಮ್ಮ ಅವರು ಜಾತ್ರಾ ಮಹೋತ್ಸವಕ್ಕೆ ಭೇಟಿ ನೀಡಿದಾಗ ದೇವಸ್ಥಾನದ ಆವರಣದಲ್ಲಿ ಸೀತಮ್ಮ ಅವರ ಜೊತೆ ಹಾಗೂ ಇತರ ತಮ್ಮ ಸಹೋದ್ಯೋಗಿಗಳ ಜೊತೆ ವಸುಂಧರಾ ಅವರು ಭರ್ಜರಿ ನೃತ್ಯ ಮಾಡಿದ್ದಾರೆ. ಕೈ ಕೈ ಹಿಡಿದು ಕುಣಿದಿದ್ದಾರೆ.
ವಸುಂಧರಾ ಅವರ ಈ ನೃತ್ಯ ಇದೀಗ ಜಾತ್ರೆಗಿಂತಲೂ ಸದ್ದು ಮಾಡುತ್ತಿದ್ದು, ಅಲ್ಲಿನ ಜನ ಅವರನ್ನು ‘ತೆಲಂಗಾಣದ ಮೊನಾಲಿಸಾ’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ತೆಲುಗು ಸಮಯಂ ವಾಹಿನಿ ವರದಿ ಮಾಡಿದೆ.
ಮೂಲತಃ ಉತ್ತರ ಪ್ರದೇಶದವರಾದ ವಸುಂಧರಾ ಯಾದವ್ ಅವರು 2023 ನೇ ಸಾಲಿನ ತೆಲಂಗಾಣ ಕೇಡರ್‌ನ ಐಪಿಎಸ್ ಅಧಿಕಾರಿ. ಅವರ ಪತಿ ಅಜಯ್ ಯಾದವ್ ಸಹ ತೆಲಂಗಾಣದ ಐಎಎಸ್ ಅಧಿಕಾರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.