ADVERTISEMENT

ರಾಹುಲ್ ಗಾಂಧಿ ಕುಟುಂಬದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ನಡ್ಡಾ

ಪಿಟಿಐ
Published 24 ಜೂನ್ 2020, 6:51 IST
Last Updated 24 ಜೂನ್ 2020, 6:51 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ನವದೆಹಲಿ: ಕಾಂಗ್ರೆಸ್‌ ಪಕ್ಷ ಹಾಗೂ ರಾಹುಲ್ ಗಾಂಧಿ ಕುಟುಂಬದ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಒಂದು ವಂಶಾಡಳಿತ ಮತ್ತು ಅದರ ಆಸ್ಥಾನಿಕರಿಗೆ ಪ್ರತಿಪಕ್ಷವಾಗಿ ತಮ್ಮ ಬಗ್ಗೆ ಹೆಚ್ಚಿನ ಭ್ರಾಂತಿ ಹಾಗೂ ಭ್ರಮೆ ಇದೆ. ತಿರಸ್ಕರಿಸಿದ ಮತ್ತು ಹೊರಹಾಕಲ್ಪಟ್ಟ ಒಂದು ಕುಟುಂಬವು ಇಡೀ ಪ್ರತಿಪಕ್ಷಗಳಿಗೆ ಸಮ ಆಗಲಾರದು’ ಎಂದು ನಡ್ಡಾ ಹೇಳಿದ್ದಾರೆ.

ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸದಾ ಟೀಕಿಸುತ್ತಿರುವ ರಾಹುಲ್ ಗಾಂಧಿ ಅವರನ್ನು ನಡ್ಡಾ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಒಂದು ವಂಶಾಡಳಿತದ ಹಿತಾಸಕ್ತಿಗಳು ಇಡೀ ದೇಶದ ಹಿತಾಸಕ್ತಿಗಳಲ್ಲ. ನಮ್ಮ ಸೇನಾಪಡೆಗಳನ್ನು ಇಡೀ ದೇಶ ಒಂದಾಗಿ ಬೆಂಬಲಿಸುತ್ತಿದೆ.ಇದು ಏಕತೆ ಮತ್ತು ಒಗ್ಗಟ್ಟಿನ ಸಮಯ’ ಎಂದುಟ್ವೀಟ್ ಮಾಡಿದ್ದಾರೆ.

‘ಒಂದು ವಂಶಾಡಳಿತದ ಕೆಟ್ಟ ನಿರ್ಧಾರಗಳಿಂದ ಭಾರತವು ಸಾವಿರಾರು ಚದರ ಕಿಲೋಮೀಟರ್ ಭೂಮಿಯನ್ನು ಕಳೆದುಕೊಂಡಿತು. ಭಾರತೀಯ ಸೇನೆ ಪ್ರಬಲವಾಗಿ ನೆಲೆಯೂರಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶ ಕೂಡ ಬಹುತೇಕ ಕಳೆದುಹೋಗುವ ಹಂತದಲ್ಲಿತ್ತು. ದೇಶದ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸಿದ್ದರಲ್ಲಿ ಆಶ್ಚರ್ಯವಿಲ್ಲ’ಎಂದು ನಡ್ಡಾ ಹೇಳಿದ್ದಾರೆ.

ADVERTISEMENT

ಸಿಯಾಚಿನ್ ಕುರಿತ ತಮ್ಮ ವಾದವನ್ನು ಪುಷ್ಠೀಕರಿಸುವ ವರದಿಯೊಂದನ್ನು ನಡ್ಡಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಪ್ರತಿಪಕ್ಷದಲ್ಲಿರುವ ರಾಜವಂಶವು ತಂತ್ರಗಳನ್ನು ಹೆಣೆಯುತ್ತದೆ. ಅದರ ಆಸ್ಥಾನಿಕರು ಆ ನಕಲಿ ವಿಷಯಗಳನ್ನೇ ಮುಂದಿಟ್ಟು ಸರ್ಕಾರದ ವಿರುದ್ಧ ಮಾತನಾಡುತ್ತಾರೆ’ ಎಂದು ರಾಹುಲ್ ಗಾಂಧಿ ಅಥವಾ ಪಕ್ಷದ ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.

‘ಪ್ರಶ್ನೆಗಳನ್ನು ಕೇಳುವುದು ಪ್ರತಿಪಕ್ಷಗಳ ಹಕ್ಕು. ಪ್ರಧಾನಿ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಎಲ್ಲ ನಾಯಕರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಆರೋಗ್ಯಕರ ಚರ್ಚೆಯೂ ನಡೆಯಿತು. ಕೇಂದ್ರ ತೆಗೆದುಕೊಳ್ಳುವ ನಿರ್ಧಾರವನ್ನು ಎಲ್ಲರೂ ಬೆಂಬಲಿಸಿದ್ದಾರೆ. ಆದರೆ ಒಂದು ಕುಟುಂಬ ಮಾತ್ರ ಇದಕ್ಕೆ ಹೊರತಾಗಿದೆ. ಅದು ಯಾವುದೆಂದು ಊಹಿಸುವಿರಾ?’ ಎಂದು ನಡ್ಡಾ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.