
ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ಅಭಿಷೇಕ್ ಬ್ಯಾನರ್ಜಿ
ಪಿಟಿಐ ಚಿತ್ರ
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದಂತೆ ಚುನಾವಣಾ ಆಯೋಗವು ನಮ್ಮ ಅಹವಾಲು ಆಲಿಸಿಲ್ಲ, ಆತಂಕ ನಿವಾರಿಸಿಲ್ಲ. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಆಕ್ರಮಣಕಾರಿ ಮನೋಭಾವ ಹೊಂದಿದ್ದಾರೆ’ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.
ಬುಧವಾರ ಇಲ್ಲಿ ಎಸ್‌ಐಆರ್ ಬಗ್ಗೆ ಸಿಇಸಿ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ, ಅಭಿಷೇಕ್ ಬ್ಯಾನರ್ಜಿ ಸುದ್ದಿಗಾರರೊಂದಿಗೆ ಮಾತನಾಡಿದರು. ‘ನಾವು ಮಾತು ಆರಂಭಿಸುತ್ತಿದ್ದಂತೆ ಸಿಇಸಿ ಸಹನೆ ಕಳೆದುಕೊಂಡರು. ಎಸ್‌ಐಆರ್ ವಿಷಯವಾಗಿ ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ’ ಎಂದು ಅವರು ಹೇಳಿದರು.
‘ಚುನಾವಣೆಯಲ್ಲಿ ಮತಕಳವು ಮತದಾರರ ಪಟ್ಟಿಯ ಮೂಲಕ ನಡೆಯುತ್ತಿದೆಯೇ ಹೊರತು, ಇವಿಎಂ ಮೂಲಕ ಅಲ್ಲ. ಮಹಾರಾಷ್ಟ್ರ, ಹರಿಯಾಣ ಮತ್ತು ಬಿಹಾರದಲ್ಲಿ ಈ ವಿಷಯವನ್ನೇ ಪರಿಣಾಮಕಾರಿಯಾಗಿ ಮತದಾರರ ಎದುರು ತೆರೆದಿಟ್ಟಿದ್ದರೆ ವಿರೋಧ ಪಕ್ಷಗಳು ಗೆಲ್ಲಬಹುದಿತ್ತು. ಆದರೆ, ಮತ ಕಳವು ತಡೆಯುವುದರಲ್ಲಿ ವಿರೋಧ ಪಕ್ಷಗಳು ವಿಫಲವಾದವು. ಬಿಜೆಪಿ ಇದರ ಲಾಭ ಪಡೆಯಿತು’ ಎಂದು ಅವರು ಹೇಳಿದರು.
ಸಿಇಸಿ ಜ್ಞಾನೇಶ್ ಕುಮಾರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂವಿಧಾನ ಮತ್ತು ಚುನಾವಣಾ ಆಯೋಗವನ್ನು ನಾಶಮಾಡುವ ಕಾರ್ಯಾಚರಣೆಗೆ ಕಳುಹಿಸಿರುವುದು ಕಾಕತಾಳೀಯ ಅಲ್ಲ’ ಎಂದು ಬ್ಯಾನರ್ಜಿ ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.