ADVERTISEMENT

ತ್ರಿಪುರಾ: ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಬಿಜೆಪಿಯ ಪ್ರತಿಭಟನೆ ಬಿಸಿ

ಪಿಟಿಐ
Published 2 ಆಗಸ್ಟ್ 2021, 12:01 IST
Last Updated 2 ಆಗಸ್ಟ್ 2021, 12:01 IST
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಸೋಮವಾರ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು (ಪಿಟಿಐ ಚಿತ್ರ)
ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಸೋಮವಾರ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು (ಪಿಟಿಐ ಚಿತ್ರ)   

ಅಗರ್ತಲಾ:ತ್ರಿಪುರಾದ ಅಗರ್ತಲಾ ವಿಮಾನ ನಿಲ್ದಾಣದಿಂದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿಯವರ ಬೆಂಗಾವಲು ವಾಹನವನ್ನು ಬಿಜೆಪಿ ಕಾರ್ಯಕರ್ತರು ಹಲವು ಬಾರಿ ತಡೆಯಲು ಪ್ರಯತ್ನಿಸಿ, ಪ್ರತಿಭಟನೆ ನಡೆಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬ್ಯಾನರ್ಜಿಯವರ ಬೆಂಗಾವಲು ವಾಹನವನ್ನು ಮೊದಲು ಪಶ್ಚಿಮ ತ್ರಿಪುರಾ ಜಿಲ್ಲೆಯ ಚರಿಲಂನಲ್ಲಿ, ನಂತರಸಿಪಹಿಜಾಲ ಜಿಲ್ಲೆಯ ಕಮಲಸಾಗರದಲ್ಲಿ ತಡೆದು ನಿಲ್ಲಿಸಿದ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ರಸ್ತೆ ತಡೆಗಟ್ಟಲು ಪ್ರಯತ್ನಿಸಿದರು ಎಂದು ಮೂಲಗಳು ಹೇಳಿವೆ.

ಅಭಿಷೇಕ್‌ ಬ್ಯಾನರ್ಜಿಯವರು ಉದಯಪುರದ ತ್ರಿಪುರೇಶ್ವರಿ ದೇವಸ್ಥಾನವನ್ನು ತಲುಪುತ್ತಿದ್ದಂತೆ, ಬಿಜೆಪಿ ಕಾರ್ಯಕರ್ತರ ಗುಂಪು ‘ಅಭಿಷೇಕ್ ವಾಪಸ್‌ ಹೋಗಿ’ ಎಂದು ಘೋಷಣೆ ಕೂಗಿ, ಅವರನ್ನು ತಡೆಯಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಟಿಎಂಸಿ ಬೆಂಬಲಿಗರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಆಗ ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಬಾವುಟದ ಕೋಲುಗಳಿಂದ ಬ್ಯಾನರ್ಜಿ ಅವರ ಕಾರಿಗೆ ಹೊಡೆದಿದ್ದಾರೆ. ಆದರೆ ಕಾರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ಹೇಳಿವೆ.

ADVERTISEMENT

ಕೇಂದ್ರದ ಬಿಜೆಪಿ ಆಡಳಿತದಲ್ಲಿ ತ್ರಿಪುರಾದಲ್ಲಿ ಪ್ರಜಾಪ್ರಭುತ್ವ ತಳಮಟ್ಟಕ್ಕೆ ಕುಸಿದಿದೆ. ಬಿಪ್ಲವ್‌ ದೇವ್‌ ಮತ್ತು ಬಿಜೆಪಿ ರಾಜ್ಯವನ್ನು ಇನ್ನಷ್ಟು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ, ಒಳ್ಳೆಯ ಕೆಲಸ’ ಎಂದು ಬ್ಯಾನರ್ಜಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದು, ಘಟನೆಯ ವಿಡಿಯೊ ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.