ಟಿಎಂಸಿ
ಕೋಲ್ಕತ್ತ: ತಮ್ಮದೇ ಸರ್ಕಾರ ನೇಮಿಸಿದ ರಾಜಕೀಯ ಸಲಹಾ ಸಂಸ್ಥೆ ಐ–ಪ್ಯಾಕ್ ವಿರುದ್ದ ಆರೋಪ ಮಾಡಿದ ತೃಣಮೂಲ ಕಾಂಗ್ರೆಸ್‌ನ ಹಿರಿಯ ಶಾಸಕ ಮದನ್ ಮಿತ್ರ ಆವರು ಮಂಗಳವಾರ ಕ್ಷಮೆ ಯಾಚಿಸಿದ್ದಾರೆ.
ಈ ಕುರಿತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುಬ್ರತಾ ಬಕ್ಷಿ ಅವರಿಗೆ ಪತ್ರ ಬರೆದು ಕ್ಷಮೆ ಯಾಚಿಸಿದ್ದಾರೆ. ‘ನನ್ನ ಹೇಳಿಕೆ ಪಕ್ಷದ ಘನತೆಗೆ ಕುತ್ತು ತಂದಿದೆ. ಪಕ್ಷದ ನಾಯಕಿಯೂ ಆಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೀವ್ರ ನೋವಾಗಿದೆ. ನನ್ನ ಹೇಳಿಕೆಯ ಉದ್ದೇಶವನ್ನು ಅಪಾರ್ಥ ಮಾಡಿಕೊಳ್ಳದೇ ಪಕ್ಷವು ನನ್ನನ್ನು ಕ್ಷಮಿಸಬೇಕು’ ಎಂದು ಕೋರಿದ್ದಾರೆ.
‘ಪಕ್ಷವು ನನ್ನಿಂದ ಕ್ಷಮೆ ಯಾಚಿಸಿರಲಿಲ್ಲ. ಪತ್ರ ಬರೆದು ಕ್ಷಮೆ ಕೋರಬೇಕೆಂದು ನನಗೇ ಅನಿಸಿತು. ನನ್ನ ಹೇಳಿಕೆ ಪಕ್ಷದ ಘನತೆಗೆ ಚ್ಯುತಿ ತರಬಾರದು ಎಂಬುದಷ್ಟೇ ನನ್ನ ಉದ್ದೇಶ’ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಐ–ಪ್ಯಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದ ಮಿತ್ರ, ‘ರಾಜಕೀಯ ಸಲಹೆಗೆ ನೇಮಿಸಿಕೊಂಡಿರುವ ಸಂಸ್ಥೆಯು ಪಕ್ಷದೊಳಗೆ ಲಾಭಕೋರರಿಗೆ ನೆರವಾಗಿದೆ. ಮಮತಾ ಬ್ಯಾನರ್ಜಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು.
ಟಿಎಂಸಿ ರಾಜಕೀಯ ಸಲಹಾ ಏಜೆನ್ಸಿಯಾಗಿ ನಿಯೋಜನೆಗೊಳ್ಳುವ ಮೊದಲೇ ಐ–ಪ್ಯಾಕ್ ವಿರುದ್ಧ ಕೆಲ ಆರೋಪಗಳು ಕೇಳಿಬಂದಿದ್ದವು. 2021ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಗ್ರಾಮೀಣ ಭಾಗದಿಂದ ಈ ಸಂಸ್ಥೆಯ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತವಾಗಿತ್ತು ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.