ಕೋಲ್ಕತ್ತ: ಪಶ್ವಿಮ ಬಂಗಾಳದಲ್ಲಿ ವಲಸೆ ಕಾರ್ಮಿಕರನ್ನು ಹೀಗಳೆದರೆ ಅಂಥವರ ಗಂಟಲಿಗೆ ಆ್ಯಸಿಡ್ ಸುರಿಯುವುದಾಗಿ ಬಿಜೆಪಿ ವಿರುದ್ಧ ಟಿಎಂಸಿ ಶಾಸಕ ಅಬ್ದುಲ್ ರಹೀಮ್ ಬಾಕ್ಸಿ ವಾಗ್ದಾಳಿ ನಡೆಸಿದ್ದಾರೆ.
ತಾವು ಪ್ರತಿನಿಧಿಸುವ ಕ್ಷೇತ್ರದ ಮಾಲತಿಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
‘ಬಂಗಾಳದ ವಲಸೆ ಕಾರ್ಮಿಕರ ವಿರುದ್ಧದ ದಾಳಿಯನ್ನು ಖಂಡಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಶಾಸಕರೊಬ್ಬರು ಅಸಹ್ಯಕರ ಮಾತುಗಳನ್ನಾಡಿದರು. ಅದನ್ನು ಬಲವಾಗಿ ಖಂಡಿಸಿದ್ದೇನೆ. ಪಶ್ಚಿಮ ಬಂಗಾಳದ ಆ ಕಾರ್ಮಿಕರನ್ನು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಎಂದು ಹಣಪಟ್ಟಿ ಅಂಟಿಸಿದ್ದಾರೆ. ನಮ್ಮ ರಾಜ್ಯದಿಂದ ಹೊರ ರಾಜ್ಯಗಳಿಗೆ ಉದ್ಯೋಗ ಅರಿಸಿ ಹೋಗುವವರನ್ನು ಈ ರೀತಿ ಅವಮಾನಿಸಲು ಅವರಿಗೆಷ್ಟು ಧೈರ್ಯ’ ಎಂದು ಪ್ರಶ್ನಿಸಿದ್ದಾರೆ.
‘ಇಂಥ ಹೇಳಿಕೆ ನೀಡಿದ ಅವರ ಬಾಯಿ ಮುಚ್ಚಿಸಲು ಅವರ ಗಂಟಲಿಗೆ ಆ್ಯಸಿಡ್ ಸುರಿಯುವುದಾಗಿ ಎಚ್ಚರಿಕೆ ನೀಡುತ್ತೇನೆ’ ಎಂದಿದ್ದಾರೆ.
‘ಒಡೆದಾಳುವ ರಾಜಕೀಯ ನೀತಿ ಅನುಸರಿಸುವ ಬಿಜೆಪಿ ಮುಖಂಡರಿಗೆ ರಾಜ್ಯದ ಜನರು ಬಾಂಗ್ಲಾದೇಶದ ನುಸುಳುಕೋರರಂತೆ ಕಾಣಿಸುತ್ತಿದ್ದಾರೆ. ಅವರ ಕಣ್ಣುಗಳನ್ನು ಪರೀಕ್ಷಿಸಬೇಕು’ ಎಂದು ಬಾಕ್ಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಟಿಎಂಸಿಗೆ ಹಿಂಸೆ ಎಂಬುದು ಹೊಸತೇನೂ ಅಲ್ಲ. ಅದು ಅವರ ರಾಜಕೀಯ ಸಂಸ್ಕೃತಿ. ಮಾಲ್ಡಾ–ಮುರ್ಷಿದಾಬಾದ್‌ನಲ್ಲಿ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿದವರು ಮತ್ತು ರೋಹಿಂಗ್ಯಾಗಳು ಮಮತಾ ಬ್ಯಾನರ್ಜಿ ಅವರ ಮತಬ್ಯಾಂಕ್. ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಟಿಎಂಸಿ ಇಂಥ ಬೆದರಿಕೆ ಹಾಕುತ್ತಿರುವುದೇ ಅದರ ಗುಣಲಕ್ಷಣಗಳಿಗೆ ಹಿಡಿದ ಕನ್ನಡಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.