ADVERTISEMENT

ತಮಿಳುನಾಡು: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ; ಸಿಎಸ್ಆರ್ ನಿಧಿ ಬಳಕೆಗೆ ಅವಕಾಶ

ಇ.ಟಿ.ಬಿ ಶಿವಪ್ರಿಯನ್‌
Published 23 ಜುಲೈ 2021, 18:41 IST
Last Updated 23 ಜುಲೈ 2021, 18:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಕೇಂದ್ರ ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಹಂಚುವ ಕೋವಿಡ್‌ ಲಸಿಕೆಯ ಗರಿಷ್ಠ ಬಳಕೆಗೆ ತಮಿಳುನಾಡು ಸರ್ಕಾರ ಮಾರ್ಗವೊಂದನ್ನು ಕಂಡುಕೊಂಡಿದೆ.

ಖಾಸಗಿ ಆಸ್ಪತ್ರೆಗಳ ಕೋಟಾದಡಿ ಹಂಚಿಕೆಯಾಗಿರುವ ಲಸಿಕೆಗಳನ್ನು ಕಾರ್ಪೋರೇಟ್‌ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿ ನಿಧಿಯಡಿ (ಸಿಎಸ್‌ಆರ್‌) ಖರೀದಿಸಿ, ಅವುಗಳನ್ನು ಜನರಿಗೆ ಉಚಿತವಾಗಿ ವಿತರಿಸುವಂತೆ ತಮಿಳುನಾಡು ಸರ್ಕಾರ ಕೋರಿದೆ.

ಈ ಯೋಜನೆಗಾಗಿ ಆರೋಗ್ಯ ಇಲಾಖೆಯು ವಿವಿಧ ಕಂಪನಿಗಳಿಂದ ಈಗಾಗಲೇ ₹4 ಕೋಟಿ ಸಂಗ್ರಹಿಸಿದ್ದು, ಮುಂದಿನ ವಾರ ಚೆನ್ನೈನಲ್ಲಿ ಚಾಲನೆ ದೊರೆಯಲಿದೆ.

ADVERTISEMENT

ಅಲ್ಲದೆ, ಆಸಕ್ತ ವ್ಯಕ್ತಿಗಳೂ ತಾವು ಬಯಸಿದ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ಉಚಿತವಾಗಿ ಲಸಿಕೆ ಕೊಡಿಸಲು ಪ್ರಾಯೋಜಕತ್ವ ಪಡೆಯಬಹುದು. ಇದಕ್ಕೆ ಪೂರಕವಾದ ಅವಕಾಶವನ್ನು ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆಯಾಗಿರುವ ಕೋವಿಡ್‌ ಲಸಿಕೆಗಳು ದುಬಾರಿ ಬೆಲೆಯ ಕಾರಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬುದನ್ನು ಮನಗಂಡಿರುವ ಸರ್ಕಾರ ಈ ಯೋಜನೆ ಜಾರಿಗೊಳಿಸುತ್ತಿದೆ.

‘ಐದರಿಂದ ಆರು ದಿನಗಳಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು. ರಾಜ್ಯಕ್ಕೆ ಲಭ್ಯವಾಗುವ ಲಸಿಕೆಯ ಪ್ರತಿ ಡೋಸ್‌ ಸಮರ್ಪಕವಾಗಿ ಬಳಕೆಯಾಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಇದಕ್ಕಾಗಿ ಖಾಸಗಿ ಕಂಪನಿಗಳು, ಹಣಕಾಸು ಸಂಸ್ಥೆಗಳು ತಮ್ಮ ಸಿಎಸ್‌ಆರ್‌ ನಿಧಿ ನೀಡುವುದರ ಮೂಲಕ ಕೈಜೋಡಿಸಲು ಮುಂದಾಗಿವೆ’ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಖಾಸಗಿ ಕಂಪನಿಗಳು ಮತ್ತು ಖಾಸಗಿ ಆಸ್ಪತ್ರೆಗಳು ಈ ಯೋಜನೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದು, ಸರ್ಕಾರದ ಜತೆ ಕೈಜೋಡಿಸಲು ಉತ್ಸುಕವಾಗಿವೆ’ ಎಂದು ಸಚಿವರು ತಿಳಿಸಿದರು. ಈ ಯೋಜನೆಯ ಬಗ್ಗೆ ಸಚಿವರು ರಾಜ್ಯದ 12 ಜಿಲ್ಲೆಗಳ 250ಕ್ಕೂ ಹೆಚ್ಚು ಆಸ್ಪತ್ರೆಗಳ ಪ್ರತಿನಿಧಿಗಳ ಜತೆ ಚರ್ಚೆ ನಡೆಸಿದ್ದಾರೆ.

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಪರಿಕರಗಳನ್ನು ನೀಡುವ ಮೂಲಕ ಕಾರ್ಪೋರೇಟ್‌ ಸಂಸ್ಥೆಗಳು ಸರ್ಕಾರಕ್ಕೆ ನೆರವಾಗಿವೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆಗಳನ್ನು ನೀಡಬೇಕಿದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೇ ಇರುವ ಲಸಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಈ ಯೋಜನೆ ರೂಪಿಸಲಾಗಿದೆ ಎಂದರು.

ರಾಜ್ಯವು ಇಲ್ಲಿಯವರೆಗೆ 2 ಕೋಟಿ ಡೋಸ್‌ ಲಸಿಕೆಗಳನ್ನು ಜನರಿಗೆ ನೀಡಿದೆ. ಜುಲೈನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆಯಾಗಿದ್ದ 18 ಲಕ್ಷ ಡೋಸ್‌ಗಳ ಪೈಕಿ ಇಲ್ಲಿಯವರೆಗೆ 13.31 ಲಕ್ಷ ಡೋಸ್‌ಗಳು ಮಾತ್ರ ಬಳಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.