ADVERTISEMENT

ಸಿಡಬ್ಲ್ಯೂಎಂಎ ಸಭೆ: ಮೇಕೆದಾಟು ಚರ್ಚೆ ತಡೆಯಲು ಪ್ರಧಾನಿಗೆ ಸ್ಟಾಲಿನ್‌ ಮನವಿ

ಪಿಟಿಐ
Published 13 ಜೂನ್ 2022, 13:55 IST
Last Updated 13 ಜೂನ್ 2022, 13:55 IST
ಸ್ಟಾಲಿನ್‌
ಸ್ಟಾಲಿನ್‌   

ಚೆನ್ನೈ: ಜೂನ್‌ 17ರಂದು ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯೂಎಂಎ) ಸಭೆಯಲ್ಲಿ ಕರ್ನಾಟಕದ ಮೇಕೆದಾಟು ಯೋಜನೆಯ ಪ್ರಸ್ತಾವನೆಯ ಕುರಿತು ಚರ್ಚಿಸದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕೆಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಸೋಮವಾರ ಆಗ್ರಹಿಸಿದ್ದಾರೆ.

ಸಿಡಬ್ಲ್ಯೂಎಂಎ ಕಾರ್ಯಚಟುವಟಿಕೆಯ ವ್ಯಾಪ್ತಿಯು, ಕಾವೇರಿ ವಿಚಾರದಲ್ಲಿ ಸುಪ್ರಿಂ ಕೋರ್ಟ್‌ನ ತೀರ್ಪನ್ನು ಅನುಷ್ಠಾನಗೊಳಿಸಲು ಮಾತ್ರ ಸೀಮಿತವಾಗಿದೆ. ಬೇರೆ ಯಾವುದೇ ವಿಷಯವನ್ನು ಪರಿಗಣಿಸುವಂತಿಲ್ಲ ಎಂದೂ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್ ಹೇಳಿದ್ದಾರೆ.

ಈ ವಿಚಾರವು ನ್ಯಾಯಾಲಯದಲ್ಲಿದ್ದು, ಈ ಸಂಬಂಧ ತಮಿಳುನಾಡು ಸಲ್ಲಿಸಿರುವ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಸುಪ್ರಿಂ ಕೋರ್ಟ್‌ ಸಮಸ್ಯೆಗಳನ್ನು ಆಲಿಸಿ ತೀರ್ಮಾನ ಪ್ರಕಟಿಸುವವರೆಗೆ ಯಾವುದೇ ಚರ್ಚೆಗಳನ್ನು ಕೈಗೆತ್ತಿಕೊಳ್ಳದಂತೆ ಸಿಡಬ್ಲ್ಯೂಎಂಎ ಅಧ್ಯಕ್ಷರಿಗೆ ಸಲಹೆ ನೀಡಲು ಜಲಶಕ್ತಿ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಪ್ರಧಾನಿ ಅವರಿಗೆ ಸ್ಟಾಲಿನ್‌ ಮನವಿ ಮಾಡಿದ್ದಾರೆ.

ADVERTISEMENT

ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಎಂಬಲ್ಲಿ ಜಲಾಶಯವನ್ನು ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆಗೆ ಒಪ್ಪಿಗೆ ನೀಡಬಾರದು ಎಂದು 2021ರಲ್ಲಿ ಸಲ್ಲಿಸಿದ್ದ ಮನವಿಯ ಬಗ್ಗೆಯೂ ಸ್ಟಾಲಿನ್‌ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.