ADVERTISEMENT

ತಮಿಳುನಾಡು: 2013ರ ಬೆಂಗಳೂರಿನ ಮಲ್ಲೇಶ್ವರ ಸ್ಫೋಟದ ಶಂಕಿತ ಉಗ್ರ ಬಂಧನ

30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 16:18 IST
Last Updated 1 ಜುಲೈ 2025, 16:18 IST
<div class="paragraphs"><p>ಬಂಧನ </p></div>

ಬಂಧನ

   

ಚೆನ್ನೈ: ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಚೇರಿ ಎದುರು 2013ರಲ್ಲಿ ನಡೆದ ಬಾಂಬ್‌ ಸ್ಫೋಟ ಸೇರಿದಂತೆ ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ನಡೆದ ಹಲವು ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿ, 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ನಗೂರ್‌ ಅಬೂಬಕರ್‌ ಸಿದ್ದಿಕ್‌ನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. 

ಖಚಿತ ಮಾಹಿತಿ ಆಧರಿಸಿ ತಮಿಳುನಾಡು ವಿಶೇಷ ಪೊಲೀಸ್‌ ತಂಡವು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಸಿದ್ದಿಕ್‌ನನ್ನು ವಶಕ್ಕೆ ಪಡೆದಿದೆ. ಈತನ ಸಹಚರ ತಿರುನೆಲ್ವೇಲಿ ಮಹಮದ್‌ ಅಲಿ ಎಂಬಾತನನ್ನೂ ಬಂಧಿಸಲಾಗಿದೆ. 

ADVERTISEMENT

2011ರಲ್ಲಿ ಬಿಜೆಪಿ ಮುಖಂಡ ಎಲ್‌.ಕೆ ಅಡ್ವಾಣಿ ಅವರ ರಥಯಾತ್ರೆ ಮಧುರೈ ಮೂಲಕ ಸಾಗುವಾಗ, ರಥಯಾತ್ರೆ ಮಾರ್ಗದಲ್ಲಿ ಬಾಂಬ್‌ ಇರಿಸಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ, 1995ರಲ್ಲಿ ಚೆನ್ನೈನ ಹಿಂದು ಮುನ್ನಣಿ ಕಚೇರಿ ಎದುರು ನಡೆದ ಸ್ಫೋಟ, 1999ರಲ್ಲಿ ಚೆನ್ನೈನ  ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸೇರಿದಂತೆ 7 ಕಡೆ ಬಾಂಬ್‌ ಇರಿಸಿದ ಪ್ರಕರಣದಲ್ಲಿ ಸಿದ್ದಿಕ್‌ ಪ್ರಮುಖ ಆರೋಪಿಯಾಗಿದ್ದಾನೆ.

2013ರ ಏಪ್ರಿಲ್‌ 17ರಂದು ಮಲ್ಲೇಶ್ವರದಲ್ಲಿ ನಡೆದ ಸ್ಫೋಟದಲ್ಲಿ 16 ಮಂದಿ ಗಾಯಗೊಂಡಿದ್ದರು. 1998ರಲ್ಲಿ ಬಿಜೆಪಿ ಮುಖಂಡ ಎಲ್‌.ಕೆ ಅಡ್ವಾಣಿಯರು ಭಾಗವಹಿಸಿದ  ಕೊಯಮತ್ತೂರು ರ್‍ಯಾಲಿಯಲ್ಲಿ  ಸರಣಿ  ಬಾಂಬ್‌ ಸ್ಫೋಟದ ಹೊಣೆಯನ್ನು ಮಹಮದ್‌ ಅಲಿ ಖಾನ್‌ ಸ್ಥಾಪಿತ  ‘ಆಲ್‌–ಉಮ್ಮ’ ಸಂಘಟನೆ ಹೊತ್ತುಕೊಂಡಿತ್ತು. ಈ  ಸ್ಫೋಟದಲ್ಲೂ ಸಿದ್ದಿಕ್‌ ಪಾತ್ರ ಇದೆ. ಮೂರು ದಶಕಗಳಿಂದ ತಪ್ಪಿಸಿಕೊಂಡಿದ್ದ ಈತ ಕೊನೆಗೂ ಪೊಲೀಸ್‌ ಬಲೆಗೆ ಬಿದ್ದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.