ADVERTISEMENT

ಪಠ್ಯಕ್ರಮದಿಂದ ಅರುಂಧತಿ ರಾಯ್‌ ಕೃತಿ ರದ್ದು

ಪಿಟಿಐ
Published 12 ನವೆಂಬರ್ 2020, 15:23 IST
Last Updated 12 ನವೆಂಬರ್ 2020, 15:23 IST
ಅರುಂಧತಿ ರಾಯ್‌
ಅರುಂಧತಿ ರಾಯ್‌   

ಚೆನ್ನೈ: ತಮಿಳುನಾಡು ವಿಶ್ವವಿದ್ಯಾಲಯವೊಂದರ ಇಂಗ್ಲೀಷ್‌ ಸ್ನಾತಕೋತ್ತರ ಪದವಿ ಪಠ್ಯಕ್ರಮದ ಭಾಗವಾಗಿದ್ದ ಅರುಂಧತಿ ರಾಯ್‌ ಅವರ ‘ವಾಕಿಂಗ್‌ ವಿದ್‌ ದಿ ಕಾಮ್ರೆಡ್ಸ್‌’ ಕೃತಿಯನ್ನು, ಪಠ್ಯಕ್ರಮದಿಂದ ತೆಗೆಯಲಾಗಿದೆ.

ಈ ಕೃತಿಯನ್ನು ಪಠ್ಯಕ್ರಮದ ಭಾಗ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್‌(ಎಬಿವಿಪಿ) ಸೇರಿದಂತೆ ಹಲವರು ಖಂಡಿಸಿದ್ದರು. ಈ ಕೃತಿಯು ಉಗ್ರವಾದವನ್ನು ವೈಭವೀಕರಿಸುತ್ತಿದೆ ಹಾಗೂ ದೇಶದ್ರೋಹಿ ವಿಷಯಗಳನ್ನು ಒಳಗೊಂಡಿದೆ ಎಂದು ಎಬಿವಿಪಿ ಆರೋಪಿಸಿತ್ತು. ತಿರುನಲ್ವೇಲಿ ಮೂಲದ ಮನೋನ್ಮನಿಯಂ ಸುಂದರನರ್‌ ವಿಶ್ವವಿದ್ಯಾಲಯದಡಿ ಬರುವ ಕಾಲೇಜುಗಳ ಎಂ.ಎ ಇಂಗ್ಲೀಷ್‌ ಮೂರನೇ ಸೆಮಿಸ್ಟರ್‌ನ ಪಠ್ಯಕ್ರಮದಲ್ಲಿ 2017–18ರಿಂದ ಈ ಕೃತಿಯು ಭಾಗವಾಗಿತ್ತು. ವಿಶ್ವವಿದ್ಯಾಲಯದ ಈ ಕ್ರಮವನ್ನು ವಿರೋಧ ಪಕ್ಷಗಳಾದ ಡಿಎಂಕೆ ಹಾಗೂ ಸಿಪಿಐಎಂ ಖಂಡಿಸಿವೆ.

‘ಎಬಿವಿಪಿಯು ಕಳೆದ ವಾರ ನಮಗೆ ಲಿಖಿತ ದೂರನ್ನು ನೀಡಿತ್ತು. ಜೊತೆಗೆ ಸಿಂಡಿಕೇಟ್‌ ಸದಸ್ಯರೂ ಈ ಕುರಿತು ದೂರು ಸಲ್ಲಿಸಿದ್ದರು. ಪುಸ್ತಕದಲ್ಲಿ ವಿವಾದಾತ್ಮಕ ವಿಷಯಗಳಿದ್ದು, ಪಠ್ಯಕ್ರಮದಿಂದ ಇದನ್ನು ತೆಗೆಯಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿತ್ತು. 207–18ರಲ್ಲಿ ಪಠ್ಯಕ್ರಮವನ್ನು ರಚಿಸಿದ ಸಮಿತಿಯ ಅಧ್ಯಕ್ಷರೂ ಇದರ ಭಾಗವಾಗಿದ್ದರು. ಬುಧವಾರ ನಡೆದ ಸಭೆಯಲ್ಲಿ ಈ ಕೃತಿಯನ್ನು ಪಠ್ಯಕ್ರಮದಿಂದ ತೆಗೆಯಲು ನಿರ್ಧರಿಸಲಾಗಿದ್ದು, ಇದರ ಬದಲಾಗಿ ಪದ್ಮ ಪ್ರಶಸ್ತಿ ಪುರಸ್ಕೃತ ಎಂ.ಕೃಷ್ಣನ್‌ ಅವರ ‘ಮೈ ನೇಟಿವ್‌ ಲ್ಯಾಂಡ್‌, ಎಸ್ಸೇಸ್‌ ಆನ್‌ ನೇಚರ್‌’ ಕೃತಿಯನ್ನು ಸೇರಿಸಲಾಗಿದೆ’ ಎಂದು ಎಂಎಸ್‌ಯು ಕುಲಪತಿ ಕೆ.ಪಿಚುಮಣಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.