ನವದೆಹಲಿ: ಸುಪ್ರೀಂ ಕೋರ್ಟ್ ಕಟ್ಟಡದ ಕಾರಿಡಾರ್‌ನಲ್ಲಿ ಅಳವಡಿಸಲಾಗಿರುವ ಗಾಜಿನ ಗೋಡೆಯನ್ನು ತೆರವುಗೊಳಿಸಲು ನ್ಯಾಯಾಲಯ ನಿರ್ಧರಿಸಿದೆ.
ಈ ಕುರಿತು ಶನಿವಾರ ಪ್ರಕಟಣೆ ಹೊರಡಿಸಿರುವ ಸುಪ್ರೀಂ ಕೋರ್ಟ್ ಆಡಳಿತವು, ‘ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಹಾಗೂ ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಎಒಆರ್‌ಎ) ಎತ್ತಿದ ಸಮಸ್ಯೆಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಒಂದರಿಂದ ಐದನೇ ಕೊಠಡಿಗಳ ಮುಂದೆ ಗಾಜಿನಿಂದ ಮಾಡಲಾಗಿರುವ ವಿನ್ಯಾಸವನ್ನು ತೆರವುಗೊಳಿಸಲು ಎಲ್ಲ ನ್ಯಾಯಧೀಶರು ಒಮ್ಮತದಿಂದ ನಿರ್ಧರಿಸಿದ್ದಾರೆ’ ಎಂದು ತಿಳಿಸಿದೆ.
‘ನ್ಯಾಯಾಲಯ ಕಟ್ಟಡದ ಮೂಲ ವಿನ್ಯಾಸ, ಗೋಚರತೆ, ಕಟ್ಟಡದ ಸೌಂದರ್ಯ ಹಾಗೂ ನ್ಯಾಯಾಲಯ ಪ್ರವೇಶವನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದಿದೆ.
ಹವಾ ನಿಯಂತ್ರಿತ ಗಾಜಿನ ಭಾಗಗಳನ್ನು ತೆರವುಗೊಳಿಸಿ, ಸುಪ್ರೀಂ ಕೋರ್ಟ್‌ನ ಮೂಲ ವಿನ್ಯಾಸವನ್ನು ಮರುಸ್ಥಾಪಿಸುವಂತೆ ಕೋರಿ ಬಾರ್ ಅಸೋಸಿಯೇಷನ್, ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಜೆಐ ಸಂಜೀವ್ ಖನ್ನಾ ಅವರಿಗೆ ಮನವಿ ಮಾಡಿತ್ತು. ಗಾಜಿನ ಭಾಗಗಳಿಂದ ಸ್ಥಳಾವಕಾಶವು ಕಡಿಮೆಯಾಗಿದ್ದು, ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂದು ಹೇಳಿತ್ತು.
ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಆಗಿದ್ದಾಗ ಈ ಗಾಜಿನ ಭಾಗಗಳನ್ನು ಅಳವಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.