ನವದೆಹಲಿ: ‘ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಒಪ್ಪಂದದ ಅನುಸಾರ ಮೂಲಸೌಲಭ್ಯ ಕಲ್ಪಿಸುತ್ತಿಲ್ಲ ಹಾಗೂ ವಾಹನಗಳ ಸರಾಗ ಚಲನೆಗೆ ಕ್ರಮ ವಹಿಸುತ್ತಿಲ್ಲ’ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಟೋಲ್ ಪ್ಲಾಜಾಗಳ ಕಾರ್ಯನಿರ್ವಹಣೆ ಸುಧಾರಣೆಗೆ ಕೈಗೊಂಡಿರುವ ಕ್ರಮಗಳ ವಿವರ ನೀಡಿ ಎಂದೂ ಅಧಿಕಾರಿಗಳಿಗೆ ಸೂಚಿಸಿದೆ. ಸಭೆಯಲ್ಲಿ ಸಂಸದರು, ‘ಪಕ್ಷಭೇದ ಮರೆತು ಟೋಲ್‌ಗಳಲ್ಲಿ ಅಧಿಕ ಶುಲ್ಕ ಸಂಗ್ರಹಿಸಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟೋಲ್ ಸಂಗ್ರಹ, ಟೋಲ್ ನಿಯಂತ್ರಣ, ದರ ನಿಗದಿ, ಬಳಕೆದಾರರ ಶುಲ್ಕ ಸಂಗ್ರಹ ಸೇರಿದಂತೆ ಟೋಲ್‌ಗಳಲ್ಲಿನ ವಿವಿಧ ವಿವಿಧ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಕಾಂಗ್ರೆಸ್‌ನ ಮುಖಂಡ, ಸಂಸದ ಕೆ.ಸಿ.ವೇಣುಗೋಪಾಲ್ ನೇತೃತ್ವದ ಸಮಿತಿಯು ಸಭೆ ನಡೆಸಿತು.
ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ವಿ.ಉಮಾಶಂಕರ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧ್ಯಕ್ಷ ಸಂತೋಷ್ ಕುಮಾರ್ ಯಾದವ್, ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಶೌಚಾಲಯ ಸೌಲಭ್ಯ, ಅಪಘಾತ ಸಹಾಯವಾಣಿ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಟೋಲ್‌ಗಳಲ್ಲಿ ಕಲ್ಪಿಸಿಲ್ಲ. ವಾಹನ ದಟ್ಟಣೆ ನಿವಾರಣೆಗೆ ಪ್ಲಾಜಾಗಳ ನಿರ್ವಾಹಕರು ಏಕೆ ಕ್ರಮವಹಿಸುತ್ತಿಲ್ಲ ಎಂದೂ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.
ಸೌಲಭ್ಯ ಒದಗಿಸದ ನಿರ್ವಾಹಕರ ಮೇಲೆ ಕೈಗೊಂಡ ಶಿಸ್ತುಕ್ರಮಗಳ ವಿವರ ನೀಡುವಂತೆ ಆಗ್ರಹಪಡಿಸಿದರು. ‘ಕೇರಳದ ಪಲಿಯೆಕ್ಕರ ಟೋಲ್ ಪ್ಲಾಜಾದಲ್ಲಿ ₹ 1,506 ಕೋಟಿ ಟೋಲ್ ಸಂಗ್ರಹಿಸಲಾಗಿದೆ’ ಎಂಬ ಮಾಹಿತಿಯನ್ನು ಸಭೆಗೆ ತಿಳಿಸಲಾಯಿತು.
ಎನ್ಎಚ್ಎಐ ಅಧಿಕಾರಿಗಳು, ‘ದಟ್ಟಣೆ ತಪ್ಪಿಸಲು ವಾರ್ಷಿಕ ಟೋಲ್ ಪಾಸ್ ವಿತರಿಸುವ ಚಿಂತನೆ ಇದೆ. ಸದ್ಯ ದ್ವಾರಕಾ ಎಕ್ಸ್‌ಪ್ರೆಸ್ ವೇನಲ್ಲಿ ಪೈಲಟ್ ಯೋಜನೆಯಡಿ ನೋಂದಣಿ ಸಂಖ್ಯೆ ಗುರುತಿಸುವ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಲಾಗಿದೆ’ ಎಂದರು.
ಟೋಲ್ ಸಂಗ್ರಹ ಕುರಿತ ಹಾಲಿ ನಿಯಮಗಳನ್ನು ಮರುಪರಿಶೀಲಿಸಬೇಕು ಎಂದು ಸಮಿತಿಯು ಅಧಿಕಾರಿಗಳಿಗೆ ಸಲಹೆ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.