ADVERTISEMENT

ರಾಜ್ಯಸಭೆಯ 2 ಸ್ಥಾನಗಳಿಗೆ ಪ್ರತ್ಯೇಕ ಉಪಚುನಾವಣೆ: ‘ಸುಪ್ರೀಂ’ನಲ್ಲಿ ಇಂದು ವಿಚಾರಣೆ

ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಕಾಂಗ್ರೆಸ್‌ನ ಗುಜರಾತ್‌ ಘಟಕ ಸಲ್ಲಿಸಿರುವ ಅರ್ಜಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 2:53 IST
Last Updated 19 ಜೂನ್ 2019, 2:53 IST
   

ನವದೆಹಲಿ: ರಾಜ್ಯಸಭೆಯಲ್ಲಿಖಾಲಿಯಾಗಿರುವ ಎರಡು ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್‌ನ ಗುಜರಾತ್‌ ಘಟಕ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಇಂದು ( ಜೂನ್‌ 19) ಕೈಗೆತ್ತಿಕೊಳ್ಳಲಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ನಾಯಕಿ ಸ್ಮೃತಿ ಇರಾನಿ ಅವರು ಕ್ರಮವಾಗಿ ಗಾಂಧಿನಗರ ಹಾಗೂ ಅಮೇಠಿಯಿಂದ ಆಯ್ಕೆಯಾದ ಕಾರಣ ರಾಜ್ಯಸಭೆಯ ಎರಡು ಸ್ಥಾನಗಳು ತೆರವಾಗಿವೆ. ಈ ಎರಡು ಸ್ಥಾನಗಳಿಗೆ ಜುಲೈ 5ರಂದು ಉಪಚುನಾವಣೆ ನಡೆಸಲು ಆಯೋಗ ಅಧಿಸೂಚನೆ ಹೊರಡಿಸಿದೆ.

‘ತೆರವಾದ ಈ ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಹೊರಡಿಸಿರುವ ಆದೇಶ ಅಸಂವಿಧಾನಿಕ, ನಿರಂಕುಶ, ಕಾನೂನುಬಾಹಿರ ಹಾಗೂ ಸಂವಿಧಾನದ 14ನೇ ಕಲಮಿನ ಉಲ್ಲಂಘನೆಯಾಗುತ್ತದೆ ಎಂದು ಘೋಷಿಸಿ, ಈ ಆದೇಶವನ್ನು ವಜಾಗೊಳಿಸಬೇಕು’ ಎಂದು ಕೋರಿ ಗುಜರಾತ್ ವಿಧಾಸಭೆಯಲ್ಲಿ ವಿರೋಧ ಪಕ್ಷದ ನಾಯಕ ಪರೇಶ್‌ಭಾಯಿ ಧನಾನಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಪ್ರತ್ಯೇಕವಾಗಿ ಉಪಚುನಾವಣೆ ನಡೆಸಿದರೆ ಸಂವಿಧಾನ ಮತ್ತು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಮೂಲ ಆಶಯಕ್ಕೇ ಧಕ್ಕೆ ಉಂಟಾಗುವುದು. ಈಗಾಗಲೇ ಹೆಚ್ಚು ಸ್ಥಾನ ಗಳಿಸಿರುವ ಪಕ್ಷ ಅಧಿಕಾರ ದುರುಪಯೋಗಪಡಿಸಿಕೊಳ್ಳಬಹುದು’ ಎಂದು ಧನಾನಿ ಅರ್ಜಿಯಲ್ಲಿ ವಿವರಿಸಿದ್ದಾರೆ.

ರಜಾಕಾಲದ ನ್ಯಾಯಪೀಠದ ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಹಾಗೂ ಸೂರ್ಯಕಾಂತ ಅವರು ಈ ಅರ್ಜಿ ವಿಚಾರಣೆ ನಡೆಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.