ADVERTISEMENT

ಒಂದು ದಿನದ ಪ್ರತಿಭಟನೆಗೆ ಚಂದ್ರಬಾಬು ನಾಯ್ಡು ಖರ್ಚು ಮಾಡಿದ್ದು ₹11.12 ಕೋಟಿ!

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 4:57 IST
Last Updated 13 ಫೆಬ್ರುವರಿ 2019, 4:57 IST
   

ನವದೆಹಲಿ: ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೆಹಲಿಯಲ್ಲಿ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ₹11.12 ಕೋಟಿ ಖರ್ಚು ಮಾಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ನವದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಕ್ಕಾಗಿ ಆಂಧ್ರದಿಂದ ಎರಡು ವಿಶೇಷ ರೈಲಿನಲ್ಲಿ ಜನರನ್ನು ಕರೆದುಕೊಂಡು ಹೋಗಲಾಗಿತ್ತು. ಇದಕ್ಕಾಗಿ ರಾಜ್ಯ ಬೊಕ್ಕಸದಿಂದ ₹1.12 ಕೋಟಿ ಖರ್ಚಾಗಿದೆ.
ವಿತ್ತ ಸಚಿವಾಲಯದ ಆದೇಶ ಸಂಖ್ಯೆ 215ರ ಪ್ರಕಾರ ಪ್ರತಿಭಟನಕಾರರಿಗಾಗಿ ₹10 ಕೋಟಿ ಹೆಚ್ಚುವರಿ ಹಣ ವಿನಿಯೋಗಿಸಲಾಗಿದೆ.

ಅಂದರೆ ದೆಹಲಿಯಲ್ಲಿ ನಡೆಸಿದ ಒಂದು ದಿನದ ಉಪವಾಸ ಸತ್ಯಾಗ್ರಹಕ್ಕಾಗಿ ತೆಲುಗುದೇಶಂ ಪಾರ್ಟಿ ರಾಜ್ಯ ಬೊಕ್ಕಸದಿಂದ ಖರ್ಚು ಮಾಡಿದ್ದು ₹11.12 ಕೋಟಿ.

ಸರ್ಕಾರದ (ಖರ್ಚು) ಕಾರ್ಯದರ್ಶಿ ರವಿಚಂದ್ರ ಮುದ್ದಾ ಸಹಿ ಹಾಕಿದ ಸರ್ಕಾರಿ ಆದೇಶ,ಆಂಧ್ರ ಪ್ರದೇಶದ ಸರ್ಕಾರಿ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಆಗಿದೆ.

ಫೆಬ್ರುವರಿ 6ರಂದು ಹೊರಡಿಸಿದ ಸರ್ಕಾರದ ಆದೇಶದಲ್ಲಿ ಸರ್ಕಾರದ ಕಾರ್ಯದರ್ಶಿ ಶ್ರೀಕಾಂತ್ ನಾಗುಲಪಲ್ಲಿ, ಫೆ.11ರಂದು ಆಂಧ್ರ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿರುವ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿಚ್ಛಿಸುವ ರಾಜಕೀಯ ಪಕ್ಷ, ಸಂಸ್ಥೆ, ಎನ್‍ಜಿಒಗಳ ಸದಸ್ಯರಿಗಾಗಿ ಆಂಧ್ರ ಪ್ರದೇಶ ಸರ್ಕಾರವು ಸೌತ್ ಸೆಂಟ್ರಲ್ ರೈಲ್ವೇ, ಸಿಕಂದರಾಬಾದ್‍‍ನಿಂದ20 ಬೋಗಿಗಳಿರುವ 2 ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದೆ.ಒಂದು ರೈಲು ಅನಂತಪುರಂನಿಂದಲೂ ಎರಡನೇ ರೈಲು ಶ್ರೀಕಾಕುಲಂನಿಂದಲೂ ಹೊರಡಲಿದ್ದು ಫೆ. 10ಕ್ಕೆ ನವದೆಹಲಿ ತಲುಪಲಿದೆ ಎಂದು ಬರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.