ADVERTISEMENT

ತೂಗುಸೇತುವೆಯಲ್ಲಿ ಯುವಕರ ನೃತ್ಯ-ಪ್ರವಾಸಿಗರ ಎಚ್ಚರಿಕೆ ನಿರ್ಲಕ್ಷಿಸಿದ್ದ ಸಿಬ್ಬಂದಿ

ಗುಜರಾತ್‌ನ ತೂಗುಸೇತುವೆ ದುರಂತದಲ್ಲಿ 135 ಮಂದಿ ಸಾವು

ಐಎಎನ್ಎಸ್
Published 31 ಅಕ್ಟೋಬರ್ 2022, 6:43 IST
Last Updated 31 ಅಕ್ಟೋಬರ್ 2022, 6:43 IST
   

ಮೊರ್ಬಿ: ಗುಜರಾತ್‌ನ ಮೊರ್ಬಿಯಲ್ಲಿ ಸಂಭವಿಸಿದ ತೂಗುಸೇತುವೆ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದಾರೆ.

ಭಾನುವಾರ ನಡೆದಿದ್ದ ದುರಂತಕ್ಕೆ ಹಲವು ಕಾರಣಗಳನ್ನು ಭದ್ರತಾ ಸಿಬ್ಬಂದಿ ಮತ್ತು ಸರ್ಕಾರ ನೀಡುತ್ತಿದೆ. ಅದರ ಜತೆಗೇ, ತೂಗುಸೇತುವೆಗೆ ಭೇಟಿ ನೀಡಿದ್ದ ಯುವಕರ ಗುಂಪೊಂದು, ಸೇತುವೆ ಮಧ್ಯದಲ್ಲಿ ನೃತ್ಯ ಮಾಡುತ್ತಾ, ಜೋರಾಗಿ ಸೇತುವೆಯನ್ನು ಅಲುಗಾಡಿಸಿ ತೊಂದರೆ ಉಂಟುಮಾಡಿದ್ದರು ಎಂದು ಪ್ರವಾಸಿಗರೊಬ್ಬರು ದೂರಿದ್ದಾರೆ.

ಅಹಮದಾಬಾದ್ ಮೂಲದ ವಿಜಯ ಗೋಸ್ವಾಮಿ, ತಮ್ಮ ಕುಟುಂಬದ ಜತೆ ತೂಗುಸೇತುವೆಗೆ ಭೇಟಿ ನೀಡಿದ್ದರು. ಭಾನುವಾರವಾಗಿದ್ದರಿಂದ ಸಹಜವಾಗಿಯೇ ಹೆಚ್ಚಿನ ಜನಸಂದಣಿ ಇತ್ತು. ಅದರ ಜತೆಗೇ, ನವೀಕರಣಗೊಂಡು ಮತ್ತೆ ತೆರೆದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಯುವಕರ ಗುಂಪೊಂದು, ಸೇತುವೆ ಮಧ್ಯದಲ್ಲಿ ಜೋರಾಗಿ ಕುಣಿಯತ್ತಾ, ಸೇತುವೆಯನ್ನು ಅಲುಗಾಡಿಸಿದ್ದರು. ಅದರಿಂದಾಗಿ ಹಿರಿಯರಿಗೆ, ಮಕ್ಕಳಿಗೆ ತೊಂದರೆಯಾಗಿತ್ತು ಎಂದು ಗೋಸ್ವಾಮಿ ಹೇಳಿಕೆ ನೀಡಿದ್ದಾರೆ.

ಜತೆಗೆ ಈ ಬಗ್ಗೆ ತೂಗುಸೇತುವೆಯ ಭದ್ರತಾ ಸಿಬ್ಬಂದಿಗೆ ತಿಳಿಸಿದರೂ, ಅವರು ಏನೂ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರಿಗೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಗೋಸ್ವಾಮಿ ಹೇಳಿದ್ದಾರೆ.

ಯುವಕರು ಸೇತುವೆ ಮಧ್ಯದಲ್ಲಿ ನೃತ್ಯ ಮಾಡುತ್ತಾ ಗದ್ದಲ ಉಂಟುಮಾಡಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.