ADVERTISEMENT

ಕೃಷಿ ಮಸೂದೆ: ದೆಹಲಿಯ ಇಂಡಿಯಾ ಗೇಟ್‌ ಸಮೀಪ ಟ್ರ್ಯಾಕ್ಟರ್‌ ಸುಟ್ಟು ಪ್ರತಿಭಟನೆ

ಏಜೆನ್ಸೀಸ್
Published 28 ಸೆಪ್ಟೆಂಬರ್ 2020, 4:47 IST
Last Updated 28 ಸೆಪ್ಟೆಂಬರ್ 2020, 4:47 IST
ಇಂಡಿಯಾ ಗೇಟ್‌ ಸಮೀಪ ಪಂಜಾಬ್‌ ಯುವ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ
ಇಂಡಿಯಾ ಗೇಟ್‌ ಸಮೀಪ ಪಂಜಾಬ್‌ ಯುವ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ    

ನವದೆಹಲಿ: ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್‌ ಸಮೀಪ ಪಂಜಾಬ್‌ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಟ್ರ್ಯಾಕ್ಟರ್‌ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕೃಷಿ ಮಸೂದೆಗೆ ಹಲವು ಸಂಘಟನೆಗಳು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 'ಸುಮಾರು 15–20 ಜನರು ಬೆಳಿಗ್ಗೆ 7:15–7:30ರ ಸುಮಾರಿಗೆ ಇಂಡಿಯಾ ಗೇಟ್‌ ಬಳಿ ಸೇರಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ' ಎಂದು ಪೊಲೀಸರು ಹೇಳಿದ್ದಾರೆ.

ಬೆಂಕಿ ನಂದಿಸಲಾಗಿದ್ದು, ಪ್ರತಿಭಟನೆ ವೇಳೆ ಬೆಂಕಿ ಹೊತ್ತಿಸಿದವರನ್ನು ಗುರುತಿಸಲಾಗುತ್ತಿದೆ ಎಂದಿದ್ದಾರೆ.

ADVERTISEMENT

ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್ ಕೃಷಿ ಮಸೂದೆಗಳನ್ನು ವಿರೋಧಿಸಿ ಸೋಮವಾರ ಷಹೀದ್‌ ಭಗತ್‌ ಸಿಂಗ್‌ ನಗರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಕಳೆದ ಭಾನುವಾರ ಸಂಸತ್ತಿನಲ್ಲಿ ಮೂರು ಕೃಷಿ ಮಸೂದೆಗಳಿಗೆ ಅನುಮೋದನೆ ಪಡೆಯಲಾಗಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದಲೂ ಮಸೂದೆಗಳಿಗೆ ಸಮ್ಮತಿ ದೊರೆತಿದೆ. ಇದರ ಬೆನ್ನಲ್ಲೇ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಹೆಚ್ಚಿನ ರೈತರು ಪ್ರತಿಭಟನೆಗೆ ಇಳಿದಿದ್ದಾರೆ.

ಕೃಷಿ ಮಸೂದೆ ವಿಚಾರವಾಗಿಯೇ ಎನ್‌ಡಿಎ ಮೈತ್ರಿಕೂಟದಿಂದ ಹೊರಬರಲು ಶಿರೋಮಣಿ ಅಕಾಲಿ ದಳ ಇತ್ತೀಚೆಗಷ್ಟೇ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.