
ತಿರುವನಂತಪುರ: ‘ಗ್ಲೋಬಲ್ ಅಯ್ಯಪ್ಪ ಸಂಗಮ್’ ಆಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಸಮರ್ಥಿಸಿಕೊಳ್ಳಲು ಕೇರಳ ಸರ್ಕಾರ ಪ್ರಯತ್ನಿಸುತ್ತಿರುವ ನಡುವೆಯೇ, ತಿರುವಾಂಕೂರು ದೇವಸ್ವಂ ಮಂಡಳಿಯು(ಟಿಡಿಬಿ), ಅಸಮರ್ಪಕ ಪ್ರಾಯೋಜಕತ್ವಗಳು ಸೇರಿದಂತೆ ಕೆಲವು ದೋಷಗಳಿರುವುದನ್ನು ಒಪ್ಪಿಕೊಂಡಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಟಿಡಿಬಿ ಅಧ್ಯಕ್ಷ ಕೆ.ಜಯಕುಮಾರ್, ‘ಕಾರ್ಯಕ್ರಮ ಆಯೋಜಿಸಿದ್ದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಕನ್‌ಸ್ಟ್ರಕ್ಷನ್ (ಐಐಐಸಿ) ₹7.04 ಕೋಟಿಗೆ ಬಿಲ್ ನೀಡಿದೆ. ₹4.99 ಕೋಟಿಗೆ ಇತ್ಯರ್ಥಗೊಳಿಸಬೇಕೆಂದು ಟಿಡಿಬಿ ಕೇಳಲಿದೆ. ಇದನ್ನು ಅವರು ಒಪ್ಪುವ ವಿಶ್ವಾಸವಿದೆ’ ಎಂದು ತಿಳಿಸಿದರು.
‘ಅದಾನಿ ಗ್ರೂಪ್ ಕಾರ್ಯಕ್ರಮಕ್ಕೆ ನೀಡಲು ಒಪ್ಪಿಕೊಂಡಿದ್ದ ₹1 ಕೋಟಿಯೂ ಸೇರಿದಂತೆ ಕಾರ್ಯಕ್ರಮಕ್ಕೆ ಪಡೆದ ಒಟ್ಟು ಪ್ರಾಯೋಜಕತ್ವದ ಮೊತ್ತ ₹3.85 ಕೋಟಿಯಷ್ಟಾಗಿದೆ. ಇನ್ನೂ ಸುಮಾರು ₹1.15 ಕೋಟಿ ಕೊರತೆಯಿದ್ದು, ಮಂಡಳಿಯು ಮಂಡಳಿಯ ನಿಧಿಯಿಂದ ಹಣವನ್ನು ಪಡೆಯದೆ, ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲು ಪ್ರಯತ್ನಿಸುತ್ತದೆ. ಈ ಹಿಂದೆ ಹಣ ನೀಡಲು ಒಪ್ಪಿದ್ದ ಅನೇಕ ಪ್ರಾಯೋಜಕರು ಹಿಂದೆ ಸರಿದಿದ್ದಾರೆ’ ಎಂದು ಅವರು ಹೇಳಿದರು.
ಮಂಡಳಿಯ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಜಯಕುಮಾರ್, ‘ಕಾರ್ಯಕ್ರಮದ ವೆಚ್ಚಗಳಿಗೆ ಸಂಬಂಧಿಸಿದಂತೆ ಲೆಕ್ಕಪರಿಶೋಧಕರು ಎತ್ತಿರುವ ಪ್ರಶ್ನೆಗಳಿಗೆ ಟಿಡಿಬಿ ಸ್ಪಷ್ಟೀಕರಣ ನೀಡುವಲ್ಲಿ ವಿಫಲವಾಗಿದೆ’ ಎಂದು ಹೇಳಿದರು. ಆದ್ದರಿಂದ ಕೇರಳ ಹೈಕೋರ್ಟ್‌ಗೆ ಸಲ್ಲಿಸಲಾದ ವರದಿಯಲ್ಲಿ ಹಲವಾರು ಅಕ್ರಮಗಳನ್ನು ಲೆಕ್ಕಪರಿಶೋಧಕರು ಗುರುತಿಸಿದ್ದಾರೆ. ಹೈಕೋರ್ಟ್‌ಗೆ ಸಲ್ಲಿಸಲಾದ ಸ್ಪಷ್ಟೀಕರಣವನ್ನು ಉಲ್ಲೇಖಿಸಿ ಟಿಡಿಬಿ ಪ್ರಮಾಣ ಪತ್ರ ಸಲ್ಲಿಸಲಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.