ADVERTISEMENT

50 ವರ್ಷ ಪೂರೈಸಿದ ಆದಿವಾಸಿ, ದಲಿತರಿಗೆ ಪಿಂಚಣಿ: ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌

ಪಿಟಿಐ
Published 29 ಡಿಸೆಂಬರ್ 2023, 12:44 IST
Last Updated 29 ಡಿಸೆಂಬರ್ 2023, 12:44 IST
ಹೇಮಂತ್‌ ಸೊರೇನ್‌
ಹೇಮಂತ್‌ ಸೊರೇನ್‌   

ರಾಂಚಿ: ಜಾರ್ಖಂಡ್‌ನಲ್ಲಿ 50 ವರ್ಷ ಪೂರ್ಣಗೊಂಡ ಆದಿವಾಸಿ ಹಾಗೂ ದಲಿತ ಸಮುದಾಯದ ವ್ಯಕ್ತಿಗಳು ಪಿಂಚಣಿ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಘೋಷಿಸಿದ್ದಾರೆ.

ರಾಜ್ಯದಲ್ಲಿ ಜೆಎಂಎಂ (ಜಾರ್ಖಂಡ್ ಮುಕ್ತಿ ಮೋರ್ಚಾ) ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಾಂಚಿಯ ಮೊರಾಬಾಡಿ ಮೈದಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, 50 ವರ್ಷ ಪೂರ್ಣಗೊಂಡ ಆದಿವಾಸಿ ಮತ್ತು ದಲಿತರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಸಮುದಾಯಗಳಲ್ಲಿ ಮರಣ ಪ್ರಮಾಣ ಅಧಿಕವಾಗಿದ್ದು, 60 ವರ್ಷಗಳ ನಂತರ ಉದ್ಯೋಗಗಳು ಸಿಗುವುದಿಲ್ಲ ಎಂದು ಹೇಳಿದರು.

2000ರಲ್ಲಿ ಜಾರ್ಖಂಡ್‌ ರಾಜ್ಯ ರಚನೆಯಾದ ನಂತರ, 20 ವರ್ಷಗಳಲ್ಲಿ ಕೇವಲ 16 ಲಕ್ಷ ಜನರು ಮಾತ್ರ ಪಿಂಚಣಿ ಪ್ರಯೋಜನಗಳನ್ನು ಪಡೆದರು. ಆದರೆ ಜೆಎಂಎಂ ಸರ್ಕಾರವು 36 ಲಕ್ಷ ಜನರಿಗೆ ಪಿಂಚಣಿಯನ್ನು ನೀಡಿದೆ ಎಂದು ಅವರು ಪ್ರತಿಪಾದಿಸಿದರು.

ADVERTISEMENT

ನಮ್ಮ ಸರ್ಕಾರವು (ಜೆಎಂಎಂ) ನಾಲ್ಕು ವರ್ಷಗಳಲ್ಲಿ 60 ವರ್ಷ ಮೇಲ್ಪಟ್ಟ 36 ಲಕ್ಷ ಜನರಿಗೆ, 18 ವರ್ಷ ಮೇಲ್ಪಟ್ಟ ವಿಧವೆಯರಿಗೆ ಮತ್ತು ದೈಹಿಕ ವಿಕಲಚೇತನರಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಿದೆ. ಸರ್ಕಾರವು ಜನರ ಕಲ್ಯಾಣಕ್ಕಾಗಿ ಅವಿರತವಾಗಿ ಕೆಲಸ ಮಾಡುತ್ತಿದೆ ಹಾಗೂ ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಸೋರೆನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.