ADVERTISEMENT

ಗೋವಾದಲ್ಲಿ ಟಿಎಂಸಿ: ನಿಮ್ಮದು ಬಿಜೆಪಿ ವಿರುದ್ಧ ಹೋರಾಟವೋ, ಬೆಂಬಲವೋ–ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 16:47 IST
Last Updated 26 ಅಕ್ಟೋಬರ್ 2021, 16:47 IST
ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ
ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ   

ನವದೆಹಲಿ: ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ) ಗೋವಾಕ್ಕೆ ಲಗ್ಗೆ ಇಟ್ಟಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಚುನಾವಣೆಯು 'ಪ್ರವಾಸ' ಆಗಬಾರದು ಹಾಗೂ ಪಕ್ಷಗಳು ಆತ್ಮ ಶೋಧನೆ ನಡೆಸಬೇಕು ಎಂದಿದೆ.

ಗೋವಾದ ಮಾಜಿ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಸಾವಂತ್‌ ಅವರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲ ಒತ್ತಾಯಿಸಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟದೊಂದಿಗೆ ಗೋವಾದಲ್ಲಿ ಪಾರದರ್ಶಕ ಸರ್ಕಾರಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿ ಬಳಿಕ ಟಿಎಂಸಿ ರಾಷ್ಟ್ರದಾದ್ಯಂತ ತನ್ನ ಹೆಜ್ಜೆ ಗುರುತು ವಿಸ್ತರಿಸುವ ಪ್ರಯತ್ನದಲ್ಲಿದೆ. ಈಗ ಗೋವಾದ ಮೇಲೆ ಕಣ್ಣಿಟ್ಟಿರುವ ಟಿಎಂಸಿ, ಗೆಲುವು ಪಡೆಯಬೇಕು ಅಥವಾ ಕನಿಷ್ಠ ಬಹುದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಲು ಯೋಜನೆ ರೂಪಿಸಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ಮುಖಂಡ ಲುಯಿಜಿನೊ ಫೆಲೆರೊ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪ್ರಮುಖ ಸ್ಥಾನ ನೀಡಿದೆ.

ADVERTISEMENT

ಗೋವಾದಲ್ಲಿ ಭ್ರಷ್ಟಾಚಾರ ಸರ್ಕಾರದ ವಿರುದ್ಧದ ಹೋರಾಟದಲ್ಲಿ ಪಕ್ಷಗಳು ಬಿಜೆಪಿಯನ್ನು ಮತ್ತಷ್ಟು ಬಲಪಡಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಎಂದು ಸುರ್ಜೇವಾಲ ಹೇಳಿದರು. ವಿರೋಧ ಪಕ್ಷಗಳು ಗೋವಾ ಚುನಾವಣಾ ಕಣಕ್ಕೆ ಕಾಲಿಡುತ್ತಿರುವುದು ವಿರೋಧ ಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರಬಹುದು ಎಂದರು.

ಆಗಸ್ಟ್‌ 20ರಂದು ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಸಭೆಯ ಬಳಿಕವೂ ಕಾಂಗ್ರೆಸ್‌ ಹೆಜ್ಜೆ ಮುಂದಿಡದಿರುವ ಬಗ್ಗೆ ಟಿಎಂಸಿ ದೂಷಿಸಿದ್ದು, ತನ್ನದೇ ಮಾರ್ಗದಲ್ಲಿ ಮುನ್ನಡೆಯುತ್ತಿದೆ.

ಎಲ್ಲ ಪಕ್ಷಗಳಿಗೂ ಚುನಾವಣೆಯಲ್ಲಿ ಕಣಕ್ಕಿಳಿಯುವ ಹಕ್ಕಿದೆ ಎಂದಿರುವ ಸುರ್ಜೇವಾಲಾ, ಟಿಎಂಸಿಯನ್ನು ಉದ್ದೇಶಿಸಿ ಮಾತನಾಡುತ್ತ; '2017ರಲ್ಲಿ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಹೋರಾಟ ನಡೆಸಿ ಯಾವುದೇ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಯಿತು. ಅನಂತರ ರಾಜ್ಯ ತೊರಿಯಿತು. ಒಂದು ಚುನಾವಣೆಯಲ್ಲಿ ಹೋರಾಡುವುದು ಮತ್ತೆ ಅಲ್ಲಿಂದ ಹೊರಡುವುದಕ್ಕೆ ಚುನಾವಣೆಯು ಪ್ರವಾಸ ಅಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಐದು ವರ್ಷಗಳ ಬಳಿಕ ಮತ್ತೆ ಕಾಣಿಸಿಕೊಳ್ಳುವುದು....ಅವರು ಎಂಥ ಹೋರಾಟ ನಡೆಸುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.