ADVERTISEMENT

ತೆರಿಗೆ ವಂಚಕರ ಪತ್ತೆಗೆ ಕ್ರಮ: ಕೃತಕ ಬುದ್ಧಿಮತ್ತೆ ಬಳಕೆಗೆ ನಿರ್ಧಾರ; ತ್ರಿಪುರ CM

ಪಿಟಿಐ
Published 22 ಫೆಬ್ರುವರಿ 2025, 11:07 IST
Last Updated 22 ಫೆಬ್ರುವರಿ 2025, 11:07 IST
ಮಾಣಿಕ್ ಸಹಾ
ಮಾಣಿಕ್ ಸಹಾ   

ಅಗರ್ತಲಾ: ರಾಜ್ಯದಲ್ಲಿ ತೆರಿಗೆ ವಂಚಕರನ್ನು ಪತ್ತೆ ಹಚ್ಚಲು ಮತ್ತು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೃತಕ ಬುದ್ಧಿಮತ್ತೆಯನ್ನು (ಎಐ) ಬಳಸಲಾಗುತ್ತಿದೆ ಎಂದು ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಸಹಾ ಹೇಳಿದ್ದಾರೆ.

ನಗರದ ಪ್ರಜ್ಞಾ ಭವನದಲ್ಲಿ ಹಮ್ಮಿಕೊಂಡಿದ್ದ ಜಿಎಸ್‌ಟಿ ‘ಜಾಗ್ರತ ಅಭಿಯಾನ’ವನ್ನು ಉದ್ದೇಶಿಸಿ ಮಾತನಾಡಿದ ಅವರು, ಈಶಾನ್ಯ ರಾಜ್ಯದ ಅಭಿವೃದ್ಧಿಯನ್ನು ಹೆಚ್ಚಿಸುವಲ್ಲಿ ತೆರಿಗೆ ಸಂಗ್ರಹವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

2024-25ನೇ ಹಣಕಾಸು ವರ್ಷದಲ್ಲಿ ರಾಜ್ಯದ ವಾರ್ಷಿಕ ಬಜೆಟ್‌ ಗಾತ್ರ ₹27,800 ಕೋಟಿಯಷ್ಟಿದೆ. ಸರ್ಕಾರ ತನ್ನದೇ ಆದ ಆದಾಯ ಮೂಲಗಳಿಂದ ₹10,000 ಕೋಟಿ ಯೋಜನೇತರ ವೆಚ್ಚಗಳಿಗೆ ಪಾವತಿಸಬೇಕಿದೆ (ಸಂಬಳ, ಪಿಂಚಣಿ, ಸಾಲ ಮತ್ತು ಸಾಲದ ಬಡ್ಡಿ). ಉಳಿದಂತೆ ತ್ರಿಪುರ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಮಂಡಳಿಗೆ (ಟಿಟಿಎಎಡಿಸಿ) ₹3,700 ಕೋಟಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ (ಯುಎಲ್‌ಬಿ) ಶೇ 10ರಷ್ಟು ಹಣವನ್ನು ಪಾವತಿಸಬೇಕಿದೆ ಎಂದು ಅವರು ವಿವರಿಸಿದ್ದಾರೆ.

ADVERTISEMENT

ರಾಜ್ಯದ ಅಭಿವೃದ್ಧಿ ಮತ್ತು ಮೂಲಸೌಕರ್ಯ ನಿರ್ಮಾಣಕ್ಕೆ ಪೂರಕವಾಗಿ ಜನರು ತಪ್ಪದೆ ಜಿಎಸ್‌ಟಿ ಪಾವತಿಸಬೇಕು. 2047ರ ‘ವಿಕಸಿತ ಭಾರತ’ದ ಪರಿಕಲ್ಪನೆಯಡಿ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವುದು ಪ್ರತಿಯೊಬ್ಬ ಭಾರತೀಯರ ಮಹಾತ್ವಾಕಾಂಕ್ಷೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಾಗಾಗಿ ದೇಶದ ಪ್ರತಿಯೊಬ್ಬರು ಆ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದು ಮಾಣಿಕ್‌ ಸಹಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.