ತಿರುವನಂತಪುರ (ಕೇರಳ): ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲಯಾಳಂ ನಟ ಹಾಗೂ ಸಿಪಿಎಂ ಶಾಸಕ ಮುಕೇಶ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ಚಾರ್ಜ್‌ಶೀಟ್ ಸಲ್ಲಿಸಿದೆ.
‘ಪ್ರಕರಣ ಸಂಬಂಧ ಎರ್ನಾಕುಲಂ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಮುಕೇಶ್ ವಿರುದ್ಧ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾಗಿವೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
ನಟಿಯೊಂದಿಗೆ ಮುಕೇಶ್ ಅವರು ನಡೆಸಿರುವ ವ್ಯಾಟ್ಸ್ಆ್ಯಪ್ ಚಾಟ್‌ಗಳು ಮತ್ತು ಇ–ಮೇಲ್‌ಗಳನ್ನು ಸಹ ಸಾಕ್ಷ್ಯವಾಗಿ ಸಲ್ಲಿಸಲಾಗಿದೆ. ಸಾಕ್ಷಿಗಳ ಹೇಳಿಕೆಗಳ ಜತೆಗೆ ಪುರಾವೆಗಳನ್ನು ಸ್ವೀಕರಿಸಲಾಗಿದೆ ಎಂದು ಎಸ್‌ಐಟಿ ಖಚಿತಪಡಿಸಿದೆ.
2024ರ ಅಕ್ಟೋಬರ್ 22ರಂದು ಮುಕೇಶ್ ಅವರನ್ನು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಎಸ್‌ಐಟಿ ಪೊಲೀಸರು ಬಂಧಿಸಿದ್ದರು. ಸೆಷನ್ಸ್ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರಿಂದ, ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಶಾಸಕರ ಪರ ವಕೀಲರು ತಿಳಿಸಿದ್ದರು.
2010ರಲ್ಲಿ ಕೇರಳದ ತ್ರಿಶ್ಶೂರ್‌ನಲ್ಲಿ ಮುಕೇಶ್ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನಟಿಯೊಬ್ಬರು ದೂರು ನೀಡಿದ್ದರು. ಮುಕೇಶ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಒಂದು ವಡಕ್ಕಂಚೇರಿ ಪೊಲೀಸ್ ಠಾಣೆಯಲ್ಲಿ, ಇನ್ನೊಂದು ಮರಾಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಈ ಎರಡೂ ಪ್ರಕರಣದಲ್ಲಿ ಶಾಸಕರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.