ADVERTISEMENT

ಉಪ ರಾಷ್ಟ್ರಪತಿ ಚುನಾವಣೆ: ಮಾರ್ಗರೇಟ್‌ ಆಳ್ವ ಬೆಂಬಲಿಸಲು ಟಿಆರ್‌ಎಸ್‌ ತೀರ್ಮಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2022, 6:16 IST
Last Updated 5 ಆಗಸ್ಟ್ 2022, 6:16 IST
ಮಾರ್ಗರೇಟ್‌ ಆಳ್ವ
ಮಾರ್ಗರೇಟ್‌ ಆಳ್ವ   

ಹೈದರಾಬಾದ್‌: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷವು ವಿರೋಧ ಪಕ್ಷಗಳ ಅಭ್ಯರ್ಥಿ ಮಾರ್ಗರೇಟ್‌ ಆಳ್ವ ಅವರನ್ನು ಬೆಂಬಲಿಸಲು ಶುಕ್ರವಾರ ತೀರ್ಮಾನಿಸಿದೆ.

ಈ ಸಂಬಂಧ ಟಿಆರ್‌ಎಸ್‌ನ ಸಂಸದೀಯ ಪಕ್ಷದ ನಾಯಕ ಡಾ. ಕೆ. ಕೇಶವ ರಾವ್‌ ಅವರು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

‘ಟಿಆರ್‌ಎಸ್‌ನ ಅಧ್ಯಕ್ಷ ಕೆ. ಚಂದ್ರಶೇಖರ್‌ ರಾವ್ ಅವರು ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಮಾರ್ಗರೇಟ್‌ ಅಳ್ವಾ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. ಅವರ ನಿರ್ಧಾರದಂತೆ ಪಕ್ಷದ 16 ಸಂಸದರೂ ಮತ ಚಲಾಯಿಸಬೇಕು ಎಂದು ಸೂಚಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್‌ 6ರಂದು ಚುನಾವಣೆ ನಿಗದಿಯಾಗಿದ್ದು ಅಂದೇ ಫಲಿತಾಂಶ ಹೊರಬೀಳಲಿದೆ.

ಲೋಕಸಭಾ, ರಾಜ್ಯಸಭಾ ಸದಸ್ಯರು (ನಾಮ ನಿರ್ದೇಶಿತ ಸದಸ್ಯರೂ ಸೇರಿ) ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸುವರು. ಹಾಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್‌ 10ಕ್ಕೆ ಕೊನೆಗೊಳ್ಳಲಿದೆ.

ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೇಟ್‌ ಆಳ್ವ ಅವರನ್ನು ವಿರೋಧ ಪಕ್ಷಗಳು ತಮ್ಮ ಅಭ್ಯರ್ಥಿಯಾಗಿ ಘೋಷಿಸಿವೆ.

ಎನ್‌ಡಿಎ ತನ್ನ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಕರ್‌ ಅವರನ್ನು ನಿಯೋಜಿಸಿದೆ.

ಉಪ ರಾಷ್ಟ್ರಪತಿ ಚುನಾವಣೆಗೆ ಗೈರಾಗಲು ಟಿಎಂಸಿ ತೀರ್ಮಾನಿಸಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.