ADVERTISEMENT

ತೆಲಂಗಾಣ ಶಾಸಕರ ಖರೀದಿ ಯತ್ನ ಪ್ರಕರಣ: ಬಿ.ಎಲ್‌. ಸಂತೋಷ್‌ಗೆ ಎರಡನೇ ನೋಟಿಸ್‌ ಜಾರಿ

ಪಿಟಿಐ
Published 24 ನವೆಂಬರ್ 2022, 14:09 IST
Last Updated 24 ನವೆಂಬರ್ 2022, 14:09 IST
ಬಿ.ಎಲ್. ಸಂತೋಷ್
ಬಿ.ಎಲ್. ಸಂತೋಷ್   

ಹೈದರಾಬಾದ್‌: ಭಾರತ ರಾಷ್ಟ್ರ ಸಮಿತಿಯ (ಬಿಆರ್‌ಎಸ್‌) ಶಾಸಕರನ್ನು ಖರೀದಿಸಲು ಯತ್ನಿಸಲಾಗಿತ್ತೆಂಬ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುವಾರ ಎರಡನೇ ನೋಟಿಸ್‌ ಜಾರಿ ಮಾಡಿದೆ.ಈ ಪ್ರಕರಣದಲ್ಲಿ ಸಂತೋಷ್‌ ಜತೆಗೆ ಹೊಸದಾಗಿ ಇತರ ಮೂವರನ್ನು ಆರೋಪಿಗಳನ್ನಾಗಿ ಎಸ್‌ಐಟಿ ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿ.ಎಲ್‌. ಸಂತೋಷ್‌ ಜತೆಗೆ ಕೇರಳದವರಾದ ಜಗ್ಗು ಸ್ವಾಮಿ ಮತ್ತು ತುಷಾರ್ ವೆಳ್ಳಾಪಳ್ಳಿ ಹಾಗೂ ಬಿ. ಶ್ರೀನಿವಾಸ್ ಅವರೂ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈವರೆಗಿನ ತನಿಖೆಯ ವಿವರವನ್ನು ಎಸ್‌ಐಟಿಯು ಎಸಿಬಿ (ವಿಶೇಷ ಭ್ರಷ್ಟಾಚಾರ ವಿರೋಧಿ ಘಟಕ) ನ್ಯಾಯಾಲಯಕ್ಕೆ ಸಲ್ಲಿಸಿದೆ.

ತೆಲಂಗಾಣ ಹೈಕೋರ್ಟ್‌ ಆದೇಶದ ಮೇರೆಗೆ ಎಸ್‌ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಇದುವರೆಗೆ ವಿಚಾರಣೆಗೆ ಹಾಜರಾಗದೆ ಇರುವ ಬಿ.ಎಲ್‌. ಸಂತೋಷ್‌ ಅವರಿಗೆ ಎರಡನೇ ಬಾರಿಗೆ ನೋಟಿಸ್‌ ಜಾರಿ ಮಾಡುವಂತೆ ಹೈಕೋರ್ಟ್‌ ಬುಧವಾರ ಎಸ್‌ಐಟಿಗೆ ನಿರ್ದೇಶಿಸಿತ್ತು. ತನಿಖಾ ತಂಡದ ಎದುರು ಹಾಜರಾದ ಬಿ.ಶ್ರೀನಿವಾಸ್‌ ಅವರನ್ನು ವಿಚಾರಣೆ ನಡೆಸಲಾಗಿದೆ.

ADVERTISEMENT

ಹೊಸದಾಗಿ ನೀಡಿರುವ ನೋಟಿಸ್‌ನಲ್ಲಿ ನ.26 ಅಥವಾ ನ.28ರಂದು ವಿಚಾರಣೆಗೆ ತನಿಖಾ ತಂಡದ ಎದುರು ಹಾಜರಾಗಲು ಸೂಚಿಸಿದೆ. ನ.21ರಂದು ವಿಚಾರಣೆಗೆ ಹಾಜರಾಗುವಂತೆಸಂತೋಷ್ಹಾಗೂ ಕೇರಳದ ಇತರ ಇಬ್ಬರಿಗೆ ಎಸ್‌ಐಟಿ ಮೊದಲ ನೋಟಿಸ್‌ ಜಾರಿ ಮಾಡಿತ್ತು. ಆದರೆ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.

ಶಾಸಕರ ಖರೀದಿಗೆ ಹಣದ ಆಮಿಷವೊಡ್ಡಿರುವ ಸಂಬಂಧ ಬಿಆರ್‌ಎಸ್‌ ಶಾಸಕ ಪೈಲಟ್‌ ರೋಹಿತ್‌ ರೆಡ್ಡಿ ಸೇರಿ ನಾಲ್ವರು ಶಾಸಕರು, ಅಕ್ಟೋಬರ್‌ 26ರಂದು ದೂರು ನೀಡಿದ್ದರು. ಈ ಪ್ರಕರಣದಲ್ಲಿರಾಮಚಂದ್ರ ಭಾರತಿ ಅಲಿಯಾಸ್‌ ಸತೀಶ್‌ ಶರ್ಮಾ, ನಂದಕುಮಾರ್‌ ಮತ್ತು ಸಿಂಹಯಾಜಿ ಸ್ವಾಮಿ ಅವರೂ ಆರೋಪಿಗಳಾಗಿದ್ದಾರೆ.

ಎಫ್‌ಐಆರ್‌ ಪ್ರಕಾರ, ರೋಹಿತ್‌ ರೆಡ್ಡಿ ಅವರಿಗೆ ಆರೋಪಿಗಳು ಬಿಆರ್‌ಎಸ್‌ ತೊರೆದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ₹100 ಕೋಟಿ ಆಮಿಷವೊಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.