ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್
(ರಾಯಿಟರ್ಸ್ ಚಿತ್ರ)
ಶ್ರೀನಗರ: ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಏರ್ಪಟ್ಟ ಬೆನ್ನಲ್ಲೇ, ‘ಕಾಶ್ಮೀರ ವಿಚಾರ’ಕ್ಕೆ ಸೂಕ್ತ ‘ಪರಿಹಾರ’ ಹುಡುಕಲು ನೆರವಾಗುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೆರವಿನ ಹಸ್ತ ಚಾಚಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ‘ಕಾಶ್ಮೀರ ವಿಚಾರ’ವನ್ನು ಮತ್ತೆ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಕುರಿತು ಕಣಿವೆ ಭಾಗದ ಜನರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳು ಟ್ರಂಪ್ ಮಧ್ಯಸ್ಥಿಕೆಯಲ್ಲಿ ಗಡಿನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಕದನ ವಿರಾಮ ಘೋಷಿಸಲು ಶನಿವಾರ ಒಪ್ಪಿಕೊಂಡಿತ್ತು. ಪಹಲ್ಗಾಮ್‌ನಲ್ಲಿ ಪ್ರವಾಸಿಗರ ವಿರುದ್ಧ ಭಯೋತ್ಪಾದಕರು ದಾಳಿ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಭಯೋತ್ಪಾದಕರ ನೆಲೆಗಳ ಮೇಲೆ ಭಾರತವು ದಾಳಿ ನಡೆಸಿ ಧ್ವಂಸಗೈದಿತ್ತು. ಇದರ ಬೆನ್ನಲ್ಲೇ, ಭಾರತದ ಸೇನಾ ನೆಲೆಗಳನ್ನು ಗುರಿಯಾಗಿರಿಸಿ, ಪಾಕಿಸ್ತಾನವು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿತ್ತು.
ಈಗ ಕಣಿವೆಯಲ್ಲಿ ಬಂದೂಕಿನಿಂದ ಗುಂಡಿನ ಮೊರೆತ ಕೊನೆಯಾಗಿದೆ. ಆದರೆ, ಕಾಶ್ಮೀರ ವಿಚಾರದಲ್ಲಿ ಟ್ರಂಪ್ ನೀಡಿರುವ ಆಹ್ವಾನವು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ ಭಾರತದ ಪ್ರಾಬಲ್ಯವನ್ನು ಕುಗ್ಗಿಸುವ ಯತ್ನವೇ ಎಂಬ ಅನುಮಾನ ಹುಟ್ಟುಹಾಕಿದೆ.
‘ಆಡಳಿತತ್ಮಾಕವಾಗಿ ಯಾವುದೇ ವ್ಯಾಖ್ಯಾನ ನೀಡಿದರೂ, ಕಾಶ್ಮೀರ ಒಗ್ಗಟ್ಟಾಗಿಯೇ ಉಳಿಯಬೇಕು ಎಂಬುದು ಅವರ ಆಶಯವಾಗಿತ್ತು. ಹೀಗಾಗಿಯೇ ಸ್ನೇಹಿತ ಟ್ರಂಪ್ ಅವರು ಎರಡು ರಾಷ್ಟ್ರಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಿದರು’ ಎಂದು ಜಮ್ಮು ಮತ್ತು ಕಾಶ್ಮೀರದ ಸಚಿವ ಹಾಗೂ ಪಿಡಿಪಿಯ ಹಿರಿಯ ನಾಯಕ ನಯೀಂ ಅಖ್ತರ್ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಕಣಿವೆ ರಾಜ್ಯಕ್ಕೆ ನೀಡಿದ ವಿಶೇಷ ಸ್ಥಾನಮಾನ ಹಿಂಪಡೆದಿರುವುದೇ ‘ಅಂತಿಮ ಪರಿಹಾರ’ ಎಂದು ಬಿಜೆಪಿ ನೇತೃತ್ವದ ಸರ್ಕಾರವು ಬಿಂಬಿಸಿತ್ತು. ಆದರೆ, ಇದೇ ಅಂತಿಮ ಪರಿಹಾರವಲ್ಲ ಎಂಬುದು ಕಣಿವೆಯಲ್ಲಿ ವ್ಯಕ್ತವಾಗುತ್ತಿರುವ ಅಭಿಪ್ರಾಯವನ್ನೇ ಟ್ರಂಪ್ ಕೂಡ ಅನುಮೋದಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಗಡಿಭಾಗದಲ್ಲಿ ಭಯೋತ್ಪಾದನೆಗೆ ಬೆಂಬಲಿಸುವ ನಿಲ್ಲಿಸುವ ತನಕ ಇಸ್ಲಾಮಾಬಾದ್ ಜೊತೆಗೆ ಯಾವುದೇ ಮಾತುಕತೆ ನಡೆಸಲು ನವದೆಹಲಿಯು ಸ್ಪಷ್ಟವಾಗಿ ನಿರಾಕರಿಸಿತ್ತು. ಆದರೆ, ಕದನ ವಿರಾಮದ ವಿಚಾರದಲ್ಲಿ ಅಮೆರಿಕದ ರಾಜತಾಂತ್ರಿಕತೆಯ ಭಾಗಿಯಾಗಿರುವುದು ಭಾರತದ ನಿರ್ಧಾರಕ್ಕೂ ಹಿನ್ನಡೆ ಉಂಟುಮಾಡಿದೆ.
ಅಖ್ತರ್ ಅವರ ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಜಮ್ಮುವಿನ ಸಿಟಿಜನ್ ಕೋ–ಆಪರೇಟಿವ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಅನಿಲ್ ಸೇಥಿ, ‘ಇದು ಆತಂರಿಕವೂ ಅಲ್ಲ, ದ್ವಿಪಕ್ಷೀಯವೂ ಅಲ್ಲ, ಅಂತರರಾಷ್ಟ್ರೀಯ ಎಂಬುದು ಸಾಬೀತಾಯಿತು’ ಎಂದಿದ್ದಾರೆ. ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಶ್ಮೀರದ ಆರ್ಷೀದ್ ಅಜೀಜ್, ‘ಇದು ಭಾರತಕ್ಕೆ ಹಿನ್ನಡೆ ತಂದಿದೆಯೇ? ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಭಾರತವು ಕಾಶ್ಮೀರ ವಿಚಾರ ಮೊದಲಿನಂತಿರುವುದಿಲ್ಲ, ಸಮಸ್ಯೆ ಶಾಶ್ವತವಾಗಿ ಬಗೆಹರಿಸಲಾಗಿದೆ ಎಂದೇ ಭಾವಿಸಿತ್ತು. ಈಗ ಕಾಶ್ಮೀರ ವಿಚಾರ ಮತ್ತೆ ಸುದ್ದಿಯಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿಯೂ ಚರ್ಚೆಯಾಗುತ್ತಿದೆ’ ಎಂದು ವಿವರಿಸಿದ್ದಾರೆ.
ಆದರೆ, ಈ ವಾದವನ್ನು ಎಲ್ಲರೂ ಒಪ್ಪುತ್ತಿಲ್ಲ. ‘ಕಾಶ್ಮೀರ ವಿಚಾರವು ಮತ್ತೆ ಅಂತರರಾಷ್ಟ್ರೀಯ ವಿಚಾರವಾಗಿಲ್ಲ. ಉಗ್ರರ ದಾಳಿಗೆ ಪ್ರತ್ಯುತ್ತರ ನೀಡುವ ಮೂಲಕ ಭಾರತವು ತನ್ನ ಅಧಿಕೃತ ನಿಲುವು ಪ್ರಕಟಿಸಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯ ಮಾಜಿ ಮಹಾ ನಿರ್ದೇಶಕ ಶೇಷ್‌ಪಾಲ್ ವೈದ್ ತಿಳಿಸಿದ್ದಾರೆ.
ಕಾಶ್ಮೀರ ವಿಚಾರದಲ್ಲಿ ಮೂರನೇ ವ್ಯಕ್ತಿಯು ಮಧ್ಯಪ್ರವೇಶಿಸುವುದನ್ನು ಸ್ವಾಗತಿಸಲು ಸಾಧ್ಯವಿಲ್ಲ. ಶಿಮ್ಲಾ ಒಪ‍್ಪಂದದಂತೆ, ಈ ವಿವಾದವು ಎರಡು ರಾಷ್ಟ್ರಗಳಿಗೆ ಸಂಬಂಧಿಸಿದ್ದಾಗಿದ್ದು, ಒಟ್ಟಿಗೆ ಕೂತು ಬಗೆಹರಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.