ADVERTISEMENT

ತಿರುಪತಿಯಲ್ಲಿ ಶುರುವಾಗಲಿದೆ ವಿಶ್ವದಲ್ಲೇ ದುಬಾರಿ ಬೆಲೆಯ ಧಾರ್ಮಿಕ ಸೇವೆ!

₹ 1 ಕೋಟಿಯಿಂದ ರಿಂದ 1.5 ಕೋಟಿ ಬೆಲೆಯ ಉದಯಾಸ್ತಮಾನ ಸೇವೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 14:32 IST
Last Updated 1 ಜನವರಿ 2022, 14:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ತಿರುಪತಿಯ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿನ ₹ 1 ಕೋಟಿಯಿಂದ ₹ 1.5 ಕೋಟಿ ಬೆಲೆಯ ಉದಯಾಸ್ತಮಾನ ಸೇವೆಯು ವಿಶ್ವದಲ್ಲೇ ಅತ್ಯಂತ ದುಬಾರಿ ಧಾರ್ಮಿಕ ಸೇವೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ದೇವಸ್ಥಾನದ ಆಡಳಿತ ಮಂಡಳಿಯು ವಿಶ್ವದ ಅತ್ಯಂತ ದುಬಾರಿ ಧಾರ್ಮಿಕ ಸೇವೆಯನ್ನು ಕಾರ್ಯಗತಗೊಳಿಸಲು ಯೋಜಿಸುತ್ತಿದ್ದು, ಈ ಸೇವೆಯಲ್ಲಿ ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರು ಗರ್ಭಗುಡಿ ಮತ್ತು ಗೊತ್ತುಪಡಿಸಿದ ಇತರ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಅನುವು ಮಾಡಿಕೊಡಲಿದೆ. ಸುಪ್ರಭಾತದಿಂದ ಆರಂಭವಾಗಿ ಏಕಾಂತದವರೆಗಿನ ಮುಕ್ತಾಯದ ಹಂತದವರೆಗಿನ ಎಲ್ಲಾ ದೈವಿಕ ಆಚರಣೆಗಳನ್ನು ಈ ಸೇವೆಯಲ್ಲಿ ವೀಕ್ಷಿಸಬಹುದಾಗಿದೆ ಎಂದು ದೇವಾಲಯದ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಉದಯಾಸ್ತಮಾನ’ದ ಹೆಸರಿನ ಈ ಧಾರ್ಮಿಕ ಸೇವೆಗೆ ಟಿಕೆಟ್ ನಿಗದಿಪಡಿಸಲಾಗಿದ್ದು, ಟಿಕೆಟ್‌ವೊಂದರ ಬೆಲೆಯು ₹ 1ಕೋಟಿಯಿಂದ ಆರಂಭವಾಗಲಿದೆ. ಶುಕ್ರವಾರ ಅಭಿಷೇಕವನ್ನೊಳಗೊಂಡಂತೆ ಈ ಟಿಕೆಟ್‌ನ ಬೆಲೆ ₹ 1.5 ಕೋಟಿ ಆಗಲಿದೆ.

ADVERTISEMENT

‘₹ 1 ಕೋಟಿಯಿಂದ ₹ 1.5 ಕೋಟಿವರೆಗಿನ ಬೆಲೆಯು ದೊಡ್ಡ ಮೊತ್ತದಂತೆ ಕಾಣಿಸಬಹುದು. ಆದರೆ, ಉದಯಾಸ್ತಮಾನ ಸೇವೆ ಯಾವಾಗ ಆರಂಭವಾಗುತ್ತದೆ ಎಂದು ವಿಚಾರಿಸಿ ನಿತ್ಯವೂ ಹಲವು ದೂರವಾಣಿ ಕರೆಗಳು ಬರುತ್ತಿವೆ’ ಎಂದು ದೇವಾಲಯದ ಅಧಿಕಾರಿಗಳು ಹೇಳುತ್ತಾರೆ.

‘ಇಂತಹ ದುಬಾರಿ ಬೆಲೆಯ ಸೇವೆಗಳ ಮೂಲಕ ದೇವಾಲಯವು ಹಣ ಗಳಿಸುತ್ತಿದೆ’ ಎನ್ನುವ ಟೀಕೆಗಳನ್ನು ತಳ್ಳಿಹಾಕಿದ ಅಧಿಕಾರಿಗಳು, ‘ಈ ಆದಾಯವನ್ನು ಟಿಟಿಡಿ ಈ ಹಿಂದೆಯೇ ಯೋಜಿಸಿರುವಂತೆ ಮಕ್ಕಳ ಹೃದಯ ಆರೈಕೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮಾತ್ರ ಬಳಸಲಿದೆ’ ಎಂದು ತಿಳಿಸಿದ್ದಾರೆ.

‘ಎಷ್ಟು ಮಂದಿಗೆ ಅನುಮತಿ ನೀಡಬಹುದು ಮತ್ತು ಎಷ್ಟು ವರ್ಷಗಳವರೆಗೆ ಭಕ್ತರು ಈ ಸೇವೆಯನ್ನು ಪಡೆಯಬಹುದು ಎನ್ನುವ ನಿಯಮಗಳು ಮತ್ತು ಷರತ್ತುಗಳನ್ನು ನಾವು ರೂಪಿಸುತ್ತಿದ್ದೇವೆ. ಈ ಕುರಿತು ಶೀಘ್ರದಲ್ಲೇ ನಿರ್ಧಾರ ಮತ್ತು ಅಧಿಕೃತ ಘೋಷಣೆಯನ್ನು ಮಾಡಲಾಗುವುದು’ ಎಂದೂ ದೇವಸ್ಥಾನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೇವಾಲಯದ ಅಧಿಕಾರಿಗಳ ಪ್ರಕಾರ, ‘80ರ ದಶಕದಲ್ಲಿ ಈ ಸೇವೆ ಲಭ್ಯವಿತ್ತು. ಈ ಸೇವೆಗೆ ಆರಂಭದಲ್ಲಿ ₹ 1 ಲಕ್ಷದಿಂದ ಶುರುವಾಗಿ ನಂತರ ₹ 10 ಲಕ್ಷ ದರ ನಿಗದಿಪಡಿಸಲಾಗಿತ್ತು. ಸ್ಥಳದ ಕೊರತೆ ಮತ್ತು ಇತರ ಕಾರಣಗಳಿಂದ ಈ ಸೇವೆಯು 2010ರಲ್ಲಿ ಸ್ಥಗಿತಗೊಂಡಿತ್ತು’ ಎಂದು ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.