ಮಾಜಿ ಸಚಿವ ಸೆಂಥಿಲ್ ಬಾಲಾಜಿ ಅವರು ಕರೂರಿನ ಸರ್ಕಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಬಾಲಕನ ಆರೋಗ್ಯವನ್ನು ವಿಚಾರಿಸಿದರು
–ಪಿಟಿಐ ಚಿತ್ರ
ಚೆನ್ನೈ: ಕರೂರು ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಹೃದಯ ವಿದ್ರಾವಕ ದೃಶ್ಯಗಳು ಕಂಡುಬಂದವು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.
ನಟ ವಿಜಯ್ ಅವರ ರ‍್ಯಾಲಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 50 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಜನರೇ ಕಾಣುತ್ತಿದ್ದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ರ‍್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಇದ್ದರೂ ಸಾಕಷ್ಟು ಪ್ರಮಾಣದಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸುವಲ್ಲಿ ಆಯೋಜಕರು ಮತ್ತು ಜಿಲ್ಲಾ ಪೊಲೀಸರು ವಿಫಲರಾಗಿದ್ದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಕಳೆದ ಎರಡು ಶನಿವಾರ ಗಳಲ್ಲಿ ವಿಜಯ್ ಅವರ ರ‍್ಯಾಲಿಗಳಿಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಶನಿವಾರ ಸಂಜೆ 6 ಗಂಟೆಗೆ ರ‍್ಯಾಲಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ವಿಜಯ್ ಅವರು ಸ್ಥಳಕ್ಕೆ ಬರುವಂತೆ ಪೊಲೀಸರು ಅವರ ತಂಡವನ್ನು ಕೋರಿತ್ತು ಎಂದು ಮೂಲಗಳು ತಿಳಿಸಿವೆ.
10 ಸಾವಿರ ಮಂದಿ ಪಾಲ್ಗೊಳ್ಳುವು ದಾಗಿ ಹೇಳಿ ರ‍್ಯಾಲಿಗೆ ಅನುಮತಿ ಕೋರಲಾಗಿತ್ತು ಎಂದು ಸರ್ಕಾರಿ ಅಧಿಕಾರಿಗಳು ಸಂಘಟಕರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ, ಇದನ್ನು ಅಲ್ಲಗಳೆದಿರುವ ವಿಜಯ್ ಅವರ ಬೆಂಬಲಿಗರು, ‘ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರೂ ಭದ್ರತೆಗಾಗಿ ಸಾಕಷ್ಟು ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿರಲಿಲ್ಲ’ ಎಂದು ದೂರಿದ್ದಾರೆ.
ವಿಜಯ್ ಭಾಷಣ ಮಾಡುವಾಗ ವಿದ್ಯುತ್ ಕಡಿತಗೊಂಡಿದ್ದು, ಮೈಕ್ರೊ ಫೋನ್ ದೋಷದಿಂದಾಗಿ ಅವರ ಧ್ವನಿ ಕೇಳಿಸದಿರುವುದು ಕಾಲ್ತುಳಿತಕ್ಕೆ ಒಂದು ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
‘ನಾವೆಲ್ಲರೂ ವಿಜಯ್‌ಗಾಗಿ ಕಾಯು ತ್ತಿದ್ದೆವು. ವಿದ್ಯುತ್ ಸ್ಥಗಿತಗೊಂಡಿತು. ಅವರು ದೋಷಪೂರಿತ ಮೈಕ್ರೊಫೋನ್ ಮೂಲಕ ಮಾತನಾಡುತ್ತಿದ್ದರಿಂದ ನಾವೆಲ್ಲರೂ ಅವರ ಮಾತುಗಳನ್ನು ಕೇಳಲು ಮುಂಭಾಗಕ್ಕೆ ಹೋದೆವು. ಕಾಲ್ತುಳಿತಕ್ಕೆ ಅದು ಕೂಡ ಒಂದು ಕಾರಣ’ ಎಂದು ಕರೂರಿನ ನಿವಾಸಿ ಸುನೀತಾ ಹೇಳಿದರು.
ವಿಜಯ್ ಅವರ ಸಾರ್ವಜನಿಕ ಸಭೆಗಳಲ್ಲಿ ಭಾರಿ ಜನಸಮೂಹ ಸೇರುತ್ತಿ ರುವುದರಿಂದ ಆಯೋಜಕರಿಗೆ ಪೊಲೀಸರು 20ಕ್ಕೂ ಹೆಚ್ಚು ಷರತ್ತು ಗಳನ್ನು ವಿಧಿಸಿದ್ದರೂ ಈ ದುರಂತ ಸಂಭವಿಸಿದೆ.
ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸಲು ಚೆನ್ನೈನಿಂದ ಸುಬ್ರಮಣಿಯನ್ ಮತ್ತು ತಿರುಚಿರಾಪಳ್ಳಿಯಿಂದ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಅವರನ್ನು ಕರೂರಿಗೆ ರಾಜ್ಯ ಸರ್ಕಾರ ಕಳುಹಿಸಿದೆ. ಗಾಯಾಳುಗಳಿಗೆ ಸಹಾಯ ಮಾಡಲು ಕರೂರಿಗೆ ತೆರಳುವಂತೆ ನೆರೆಯ ತಿರುಚಿರಾಪಳ್ಳಿ ಮತ್ತು ನಾಮಕ್ಕಲ್‌ನ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸ್ಟಾಲಿನ್ ಸೂಚಿಸಿದ್ದಾರೆ.
ಪರಿಸ್ಥಿತಿಯನ್ನು ನಿಭಾಯಿಸಲು ಸುಮಾರು 400 ಪೊಲೀಸರನ್ನು ಕರೂರಿಗೆ ಕಳುಹಿಸಲಾಗಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಡೇವಿಡ್‌ಸನ್ ದೇವಶಿರ್ವತಮ್ ಹೇಳಿದ್ದಾರೆ.
ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಕರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು
‘ಭೇಟಿ ನೀಡದ ವಿಜಯ್’
ಈ ನಡುವೆ, ವಿಜಯ್ ಅವರು ಆಸ್ಪತ್ರೆ ಭೇಟಿ ನೀಡಲಿಲ್ಲ ಇಲ್ಲವೇ ಗಾಯಾಳುಗಳ ಆರೋಗ್ಯ ವಿಚಾರಿಸಲಿಲ್ಲ ಎಂದು ಹೇಳಲಾಗಿದೆ. ಅವರು ಚೆನ್ನೈಗೆ ಮರಳಿದ್ದಾರೆ.
ಈ ಮಧ್ಯೆ, ತಿರುಚಿರಾಪಳ್ಳಿ ಹಾಗೂ ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಮಾಧ್ಯಮದವರ ಕೇಳಿದ ಪ್ರಶ್ನೆಗಳಿಗೆ ವಿಜಯ್ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ‘ನಾನು ದುಃಖಿತನಾಗಿರುವೆ. ಅದನ್ನು ಪದಗಳಿಂದ ಹೇಳಲು ಆಗುವುದಿಲ್ಲ‘ ಎಂದಷ್ಟೆ ಪ್ರತಿಕ್ರಿಯಿಸಿದರು.
ವಿಜಯ್
ಕಾಲ್ತುಳಿತದಂತಹ ದುರದೃಷ್ಟಕರ ಘಟನೆಯ ಸುದ್ದಿ ತಿಳಿದು ದುಃಖವಾಯಿತು. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆದ್ರೌಪದಿ ಮುರ್ಮು, ರಾಷ್ಟ್ರಪತಿ
ಕರೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಿಂದ ತೀವ್ರ ನೋವಾಗಿದೆ. ಈ ದುಃಖವನ್ನು ತಡೆದುಕೊಳ್ಳುವ ಶಕ್ತಿ ಮೃತರ ಕುಟುಂಬಸ್ಥರಿಗೆ ನೀಡುವಂತೆ ಹಾಗೂ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುವೆಅಮಿತ್ ಶಾ, ಕೇಂದ್ರ ಗೃಹ ಸಚಿವ
ಈ ಘಟನೆಯು ವ್ಯಕ್ತಪಡಿಸಲಾಗದ ನೋವನ್ನು ಉಂಟು ಮಾಡಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ದುಃಖದಲ್ಲಿರುವ ಪೋಷಕರು, ಸಂಬಂಧಿಕರು ಮತ್ತು ತಮಿಳುನಾಡಿನ ಜನರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ.ಸಿ.ಪಿ. ರಾಧಾಕೃಷ್ಣನ್, ಉಪ ರಾಷ್ಟ್ರಪತಿ
ಅಗಲಿದ ಕುಟುಂಬಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು. ಸಂತ್ರಸ್ತರು ಹಾಗೂ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡುವಂತೆ ಹಾಗೂ ವೈದ್ಯಕೀಯ ನೆರವು ಒದಗಿಸಲು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ.ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.